ಹೊಸಪೇಟೆ: ತುಂಗಭದ್ರಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ಅಚ್ಚುಕಟ್ಟು ಭಾಗದ ರೈತರು ನಡೆಸಿದ ಬೃಹತ್ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಬೇಡಿಕೆಯಂತೆ ಎರಡು ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ.
ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ನೂರಾರು ರೈತರು ಹೊಸಪೇಟೆಯ ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ (ಟಿಬಿಬಿ) ಕಚೇರಿ ಎದುರು ಮಂಗಳವಾರ ನಡೆಸಿದ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ, ಬುಧವಾರ ಕಾಲುವೆ ಮೂಲಕ ನದಿಗೆ ಎರಡು ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ.
ಜಲಾಶಯದಲ್ಲಿ ಬುಧವಾರ ಸಂಜೆ ನೀರಿನ ಮಟ್ಟ 1,630 ಅಡಿ ಇದೆ. 12 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಒಟ್ಟು ಹೊರಹರಿವು 8,200 ಕ್ಯೂಸೆಕ್ ಇದ್ದು, ಇದರಲ್ಲಿ ನದಿಗೆ ಕಾಲೂವೆ ಮೂಲಕ 2, ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 94 ಟಿಎಂಸಿ ನೀರಿನ ಸಂಗ್ರಹ ಇದೆ.
ನದಿಗೆ ನೀರು ಬಿಡುಗಡೆಯಾದ ಹಿನ್ನೆಲೆಯಲ್ಲಿ ಅನ್ನದಾತರು ಹಾಗೂ ರೈತ ಸಂಘಟನೆಗಳ ಪ್ರಮುಖರು ಸದ್ಯ ನಿರಾಳರಾಗಿದ್ದಾರೆ. ಆದರೆ, ಮುಂದಿನ 10 ದಿನಗಳ ಬಳಿಕ ಸಭೆ ನಡೆಸಿ ನದಿಗೆ ನೀರು ಬಿಡುವ ಬಗ್ಗೆ ಪರಿಶೀಲಿಸಲಾಗುವುದು ಎಂಬ ಅಧಿಕಾರಿಗಳ ಹೇಳಿಕೆಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟು 8.5 ಟಿಎಂಸಿ ನೀರು ತಲುಪುವವರೆಗೂ ದಿನಕ್ಕೆ 2 ಸಾವಿರ ಕ್ಯೂಸೆಕ್ ನೀರು ನಿರಂತರವಾಗಿ ಹರಿಸಲೇಬೇಕು. ಇಲ್ಲದಿದ್ದರೆ ಜಲಾಶಯದ ಎದುರು ಮತ್ತೊಮ್ಮೆ ಉಗ್ರ ಹೋರಾಟ ರೂಪಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.