ಹಂಪಿ ಅಭಿವೃದ್ಧಿಗೆ ಮೂರು ಸಾವಿರ ಕೋಟಿ ರೂ.

ಹೊಸಪೇಟೆ ತಾಲೂಕಿನ ಹೊಸ ಮಲಪನಗುಡಿ ಬಳಿ ಮಂಗಳವಾರ ಸಮಾಲೋಚನಾ ಕಾರ್ಯಾಗಾರದಲ್ಲಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ.ಎನ್.ಟಿ. ಶ್ರೀನಿವಾಸ, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕ್ ಚಂದ್ರ ಇದ್ದರು.
ಹೊಸಪೇಟೆ ತಾಲೂಕಿನ ಹೊಸ ಮಲಪನಗುಡಿ ಬಳಿ ಮಂಗಳವಾರ ಸಮಾಲೋಚನಾ ಕಾರ್ಯಾಗಾರದಲ್ಲಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಶಾಸಕರಾದ ಎಚ್.ಆರ್. ಗವಿಯಪ್ಪ, ಡಾ.ಎನ್.ಟಿ. ಶ್ರೀನಿವಾಸ, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕ್ ಚಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
  • ಪ್ರವಾಸಿ ತಾಣಕ್ಕೆ ಜಾಗತಿಕ ರೂಪದ ಕಾಯಕಲ್ಪ
  • ಐತಿಹಾಸಿಕ ನಗರಿಗೆ ಭಾರಿ ಹೂಡಿಕೆಯ ಗುರಿ
  • ವಿಜಯನಗರ ಸಾಮ್ರಾಜ್ಯದ ರಾಜಧಾನಿಗೆ ಹೊಸ ಕಳೆ
  • ಪ್ರವಾಸೋದ್ಯಮ ಪ್ರಗತಿಗೆ ಮೂಲಸೌಕರ್ಯಗಳ ವಿಸ್ತರಣೆ
ಹೊಸಪೇಟೆ: ರಾಜ್ಯದ 50 ಪ್ರವಾಸಿ ಸ್ಥಳಗಳನ್ನು ಜಾಗತಿಕ ತಾಣಗಳನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯಡಿ ಮೊದಲ ಹಂತದಲ್ಲಿ ವಿಶ್ವವಿಖ್ಯಾತ ಹಂಪಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಹಂಪಿಯಲ್ಲಿ ಈಗಾಗಲೇ ಕಳೆದ ಎರಡು-ಮೂರು ವರ್ಷಗಳಿಂದ ವಿವರವಾದ ಮಾಸ್ಟರ್ ಪ್ಲಾನ್ ಹಾಗೂ ಜಿಐಎಸ್ ತಂತ್ರಜ್ಞಾನ ಆಧಾರಿತ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಮೂರು ಸಾವಿರ ಕೋಟಿ ರೂಪಾಯಿವರೆಗಿನ ಬೃಹತ್ ಹೂಡಿಕೆಯ ಈ ಯೋಜನೆಗೆ ಕೇಂದ್ರ ಸರ್ಕಾರವು ಸುಮಾರು 1,400 ರಿಂದ 1,500 ಕೋಟಿ ರೂಪಾಯಿಗಳ ಮೂಲಭೂತ ಅನುದಾನ ಒದಗಿಸಲಿದೆ. ಖಾಸಗಿ ಹೂಡಿಕೆದಾರರು ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದೊಂದಿಗೆ ಒಟ್ಟು ಹೂಡಿಕೆಯನ್ನು ಮೂರು ಸಾವಿರ ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರವಾಸೋದ್ಯಮ ವಲಯದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಮಂಗಳವಾರ ನಡೆದ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತ ರಾಜ್ಯ ಮಟ್ಟದ ಸಮಾಲೋಚನಾ ಕಾರ್ಯಾಗಾರದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಂಪಿಯ ಸಮಗ್ರ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಅತ್ಯಾಧುನಿಕ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಹಂಪಿಯ ಅಭಿವೃದ್ಧಿ ಕೇವಲ ಪ್ರವಾಸೋದ್ಯಮ ಇಲಾಖೆಗೆ ಸೀಮಿತವಾಗಿಲ್ಲ. ವಿವಿಧ ಇಲಾಖೆಗಳ ಸಮನ್ವಯದ ಅಗತ್ಯವಿರುವುದರಿಂದ ನಗರಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ನೇತೃತ್ವದಲ್ಲಿ ಜಂಟಿ ಸಭೆ ನಡೆಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರವಾಸಿಗರಿಗೆ ಅನುಕೂಲವಾಗುವಂತೆ 20 ಪ್ರಮುಖ ಸ್ಥಳಗಳಲ್ಲಿ ಟ್ರಾವೆಲರ್ ರೂಟ್‌ಗಳನ್ನು ಗುರುತಿಸಲಾಗಿದ್ದು, ಸದ್ಯ ಐದು ರೂಟ್‌ಗಳು ಸಿದ್ಧವಾಗಿವೆ. ಪರಿಸರ ಸ್ನೇಹಿ ಸಂಚಾರಕ್ಕಾಗಿ ಶೀಘ್ರವೇ ಐದು ಇ-ವಾಹನಗಳಿಗೆ ಚಾಲನೆ ನೀಡಲಾಗುವುದು. ಮುಂಜಾನೆ ನಾಲ್ಕರಿಂದಲೇ ವಿಶೇಷ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಮಗಳಿಗೆ ಬದ್ಧವಾಗಿ ನದಿಯ ಸ್ನಾನಘಟ್ಟದ ಬಳಿ ಸುರಕ್ಷತಾ ಕ್ರಮಗಳು ಹಾಗೂ ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದ ಸಚಿವರು, ಹಂಪಿ, ಮೈಸೂರು ಮತ್ತು ಲಕ್ಕುಂಡಿಯನ್ನು ಜಾಗತಿಕ ಮಟ್ಟದ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ರೂಪಿಸಲು ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಆನಂದ ಸಿಂಗ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಜಂಟಿ ಕಾರ್ಯದರ್ಶಿ ಸುವಾಸಿಶ್ ದಾಸ್, ಆಯುಕ್ತ ಡಾ.ವಿ.ರಾಮ ಪ್ರಸಾದ್ ಮನೋಹರ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಎಎಸ್ಪಿ ಮಂಜುನಾಥ್, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಮತ್ತಿತರರು ಇದ್ದರು.
"

ಹಂಪಿಯ ಅಭಿವೃದ್ಧಿಗೆ ಡೆಸ್ಟಿನೇಷನ್ ಮ್ಯಾನೇಜ್ಮೆಂಟ್ ಆರ್ಗನೈಸೇಷನ್ ರಚಿಸಲಾಗುವುದು. ಜಿಂದಾಲ್ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಹಾಗೂ ಪ್ರಮುಖ ನಗರಗಳಿಂದ ಐತಿಹಾಸಿಕ ತಾಣಗಳಿಗೆ ರೈಲು ಸಂಪರ್ಕ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಸಹಭಾಗಿತ್ವವಿಲ್ಲದೆ ಪ್ರವಾಸೋದ್ಯಮದ ಅಭಿವೃದ್ಧಿ ಅಸಾಧ್ಯ. ಮೈಸೂರು ದಸರಾದಷ್ಟೇ ಮಹತ್ವ ಪಡೆದಿರುವ ಹಂಪಿ ಉತ್ಸವದ ದಿನಾಂಕ ಹಾಗೂ ಆಚರಣೆಯ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಕೋವಿಡ್ ನಂತರ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿದ್ದು, ಸ್ಥಳೀಯರಿಗೆ ಅನುಕೂಲವಾಗುವಂತೆ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸರ್ಕಾರ ಬದ್ಧವಾಗಿದೆ.

— ಸಚಿವ ಕೆ.ಜೆ. ಜಾರ್ಜ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವ

"

ಹಂಪಿಯಲ್ಲಿ 15.4 ಕಿ.ಮೀ ಉದ್ದದ ಹೆರಿಟೇಜ್ ವಾಕ್ ನಿರ್ಮಾಣ, ಹಂಪಿ ರೈಲು ನಿಲ್ದಾಣಕ್ಕೆ ಪಾರಂಪರಿಕ ವಿನ್ಯಾಸ, ಅಂತಾರಾಷ್ಟ್ರೀಯ ಗುಣಮಟ್ಟದ ಇಂಟರ್‌ಪ್ರಿಟೇಷನ್ ಸೆಂಟರ್ ಹಾಗೂ ಪ್ರವಾಸೋದ್ಯಮ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ.

— ಎಚ್.ಆರ್. ಗವಿಯಪ್ಪ, ಹೊಸಪೇಟೆ ಶಾಸಕ

"

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಬೇಕು. ಜತೆಗೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಕೌಶಲ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಈ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ಬದ್ಧವಾಗಿದೆ.

— ಡಾ.ಎನ್.ಟಿ. ಶ್ರೀನಿವಾಸ, ಕೂಡ್ಲಿಗಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net