ಕಾಂಗ್ರೆಸ್‌ನಲ್ಲಿ ಪಾವತಿ ಸೀಟು ಸಂಸ್ಕೃತಿ ಇಲ್ಲ

ಜಮೀರ್
ಜಮೀರ್
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಯವರ ಆರೋಪಕ್ಕೆ ಸಚಿವ ಜಮೀರ್ ಕೌಂಟರ್
ಹೊಸಪೇಟೆ: ಕಾಂಗ್ರೆಸ್ ಪಕ್ಷವು ಹೈಕಮಾಂಡ್ ಆಧಾರಿತ ಪಕ್ಷವಾಗಿದ್ದು, ಸಚಿವ ಸಂಪುಟ ಪುನಾರಚನೆ ಅಥವಾ ಖಾತೆ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ವಿಜಯನಗರ‌ ಜಿಲ್ಲೆಯಲ್ಲಿ ಬರ ಅದ್ಯಯನದ ವೇಳೆ ಮಾತನಾಡಿದ ಅವರು, ಖಾತೆ ಹಂಚಿಕೆ ಅಥವಾ ಬದಲಾವಣೆ ಮುಖ್ಯಮಂತ್ರಿಗಳ ಹಕ್ಕು. ನನಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ. ಈ ಹಿಂದೆ ವಸತಿ ಸಚಿವನಾಗಿ 79,860 ಮನೆಗಳನ್ನು ಹಂಚಿಕೆ ಮಾಡಿದ ತೃಪ್ತಿ ನನಗಿದೆ. ಹೈಕಮಾಂಡ್ ಏನು ಸೂಚಿಸುತ್ತದೋ ಅದನ್ನು ಪಾಲಿಸುತ್ತೇನೆ ಎಂದರು.
ಪ್ರತಿಯೊಬ್ಬ ಶಾಸಕರಿಗೂ ಸಚಿವರಾಗಬೇಕೆಂಬ ಆಸೆ ಇರುವುದು ಸಹಜ. ಆದರೆ ಸಂಪುಟದಲ್ಲಿ 34 ಸ್ಥಾನಗಳ ಮಿತಿ ಇರುವುದರಿಂದ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೆಲವರಿಗೆ ಅಸಮಾಧಾನವಾಗುವುದು ಸ್ವಾಭಾವಿಕ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪಾವತಿ ಸೀಟು' ಸಂಸ್ಕೃತಿ ಇಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರೇ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹುದ್ದೆಗಳಿಗಾಗಿ ನಡೆದ ಹಣಕಾಸು ವ್ಯವಹಾರಗಳ ಬಗ್ಗೆ ಬಹಿರಂಗವಾಗಿ ಹೇಳಿದ್ದರು.
ಆದರೆ ಕಾಂಗ್ರೆಸ್‌ನಲ್ಲಿ ಆಂತರಿಕ ಸರ್ವೇ ಹಾಗೂ ಸಾಮರ್ಥ್ಯದ ಆಧಾರದ ಮೇಲೆ ಹೈಕಮಾಂಡ್ ಹುದ್ದೆಗಳನ್ನು ನಿರ್ಧರಿಸುತ್ತದೆ. ಪೌರಕಾರ್ಮಿಕನ ಮಗನಾದ ಬಸವನಗೌಡ ತುರವಿಹಾಳ್ ಅವರಂತಹ ತಳಮಟ್ಟದ ನಾಯಕರಿಗೂ ಶಾಸಕರಾದ ಮೊದಲ ಬಾರಿಗೆ ಸಚಿವ ಸ್ಥಾನ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net