ಕಚೇರಿಗಳಿಗೆ ಅಲೆಯುವುದೇ ಕೆಲಸವಾಗಿದೆ

ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಮುಂಡರಗಿ ತಾಲೂಕಿನ ಮುಂಡವಾಡ ಹಾಗೂ ಹಮ್ಮಿಗಿ ಗ್ರಾಮದ ರೈತರು ಪರಿಹಾರದ ಹಣ ನೀಡುವಂತೆ ಒತ್ತಾಯಿಸಿ ಹೂವಿನಹಡಗಲಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಮುಂಡರಗಿ ತಾಲೂಕಿನ ಮುಂಡವಾಡ ಹಾಗೂ ಹಮ್ಮಿಗಿ ಗ್ರಾಮದ ರೈತರು ಪರಿಹಾರದ ಹಣ ನೀಡುವಂತೆ ಒತ್ತಾಯಿಸಿ ಹೂವಿನಹಡಗಲಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Published on
ಹೂವಿನಹಡಗಲಿ: ರಾಜವಾಳ ಸಮೀಪವಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ಮುಂಡರಗಿ ತಾಲೂಕಿನ ಮುಂಡವಾಡ ಹಾಗೂ ಹಮ್ಮಿಗಿ ಗ್ರಾಮದ ರೈತರು ಪರಿಹಾರ ಹಣ ನೀಡುವಂತೆ ಒತ್ತಾಯಿಸಿ ಭೂಸ್ವಾಧೀನಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ರೈತ ಒಕ್ಕೂಟದ ಸದಸ್ಯ ವಿರೂಪಾಕ್ಷಪ್ಪ ಅಲ್ಲಿಪುರ ಮಾತನಾಡಿ, ರೈತರಿಗೆ ನೀರು ಒದಗಿಸುವ ಉದ್ದೇಶದಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ, ರಸ್ತೆ ಸೇರಿದಂತೆ ಇತರ ಕಾಮಗಾರಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಕಳೆದ 20 ವರ್ಷಗಳಿಂದ ಪರಿಹಾರದ ಹಣ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಪರಿಹಾರದ ಹಣ ನೀಡುವಂತೆ ಕಚೇರಿಗಳಿಗೆ ತಿರುಗಾಡಿ ಸಾಕಾಗಿ ಹೋಗಿದೆ ಎಂದು ದೂರಿದರು.
ಮುಂಡವಾಡ ಕೆರೆಗೆ ಒಂದು ಹನಿ ನೀರು ಬಂದಿಲ್ಲ. ಇಲಾಖೆಯಿಂದ ಇದಕ್ಕೆ ಪ್ರತ್ಯೇಕ ಪೈಪ್‌ಲೈನ್ ಮಾಡಿ ಕೆರೆ ತುಂಬಿಸಬೇಕು. ರೈತರ ಸಮಸ್ಯೆ ಕೇಳಲು ವಿಶೇಷ ಭೂಸ್ವಾಧೀನಾಧಿಕಾರಿ ಕೂಡಲೇ ಸ್ಥಳಕ್ಕೆ ಧಾವಿಸಬೇಕು ಎಂದು ಭೂಸಂತ್ರಸ್ತ ರೈತರು ಪಟ್ಟು ಹಿಡಿದರು.
ಹರಪನಹಳ್ಳಿ ಉಪ ವಿಭಾಗಾಧಿಕಾರಿ ಹಾಗೂ ಪ್ರಭಾರ ಭೂ ಸ್ವಾಧೀನಾಧಿಕಾರಿ ಸುರೇಶ್‌ಕುಮಾರ್ ದೂರವಾಣಿ ಮೂಲಕ ಮಾತನಾಡಿ, ನಾನು ಎಸ್‌ಐಆರ್ ಸಭೆಗೆ ಹಾಜರಾಗಿದ್ದು, ನಿಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸುತ್ತಿದ್ದೇವೆ, ಇನ್ನುಳಿದ ಪ್ರಕರಣಗಳನ್ನು ಕೂಡಲೇ ಪರಿಹರಿಸುವೆ ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ನಿಂಗನಗೌಡ ಪಾಟೀಲ್, ಬನ್ನೆಪ್ಪ ಪೂಜಾರ, ಹನುಮರಡ್ಡಿ ರಾಜೂರು, ಮಲ್ಲಿಕಾರ್ಜುನಗೌಡ ಪಾಟೀಲ್, ದ್ಯಾಮಪ್ಪ, ಪಕ್ಕೀರಪ್ಪ, ಹನುಮಂತ, ಮುತ್ತಣ್ಣ, ಹಾಲಪ್ಪ, ಆನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net