ಶ್ರಾವಣ ಮಾಸದ ಸಂಭ್ರಮಕ್ಕೆ ಬೆಲೆ ಕಂಟಕ

ಹೊಸಪೇಟೆ ಹೂವಿನ ಮಾರುಕಟ್ಟೆ
ಹೊಸಪೇಟೆ ಹೂವಿನ ಮಾರುಕಟ್ಟೆ
Published on

ಪ್ರಮುಖ ಮುಖ್ಯಾಂಶಗಳು

  • ಮಾರುಕಟ್ಟೆಯಲ್ಲಿ ಹೂವು-ಹಣ್ಣು ಫುಲ್ ಕಾಸ್ಟ್ಲಿ
  • ಗ್ರಾಹಕರಿಗೆ ಶಾಕ್
ಹೊಸಪೇಟೆ: ಹಬ್ಬಗಳ ಸಾಲು ಆರಂಭವಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಭರ್ಜರಿ ಕತ್ತರಿ ಬಿದ್ದಿದೆ. ನಾಗರ ಪಂಚಮಿ ಹಾಗೂ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೇಡಿಕೆ ದಿಢೀರ್ ಹೆಚ್ಚಾಗಿದ್ದು, ಬಹುತೇಕ ಹೂವುಗಳ ಬೆಲೆ ಮೂರರಿಂದ ಐದು ಪಟ್ಟು ಏರಿಕೆಯಾಗಿದೆ.
ಪೂಜೆಗೆ ಅತ್ಯಂತ ಪ್ರಮುಖವಾದ ಕನಕಾಂಬರ ಮತ್ತು ಮಲ್ಲಿಗೆ ಹೂವಿನ ದರ ಕೇಳಿ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ 400 ರೂಪಾಯಿಗೆ ಸಿಗುತ್ತಿದ್ದ ಕನಕಾಂಬರ ಇದೀಗ ಬರೋಬ್ಬರಿ 2 ಸಾವಿರ ರೂಪಾಯಿಗೆ ಜಿಗಿದಿದೆ. 200 ರೂಪಾಯಿ ಇದ್ದ ಮಲ್ಲಿಗೆ ಹೂವು 800 ರೂಪಾಯಿಗೆ ಮಾರಾಟವಾಗುತ್ತಿದ್ದರೆ, 250 ರೂಪಾಯಿ ಇದ್ದ ಕಾಕಡ ಹೂವಿನ ಬೆಲೆ ಬರೋಬ್ಬರಿ ಒಂದು ಸಾವಿರ ರೂಪಾಯಿಯ ಗಡಿ ಮುಟ್ಟಿದೆ. ಅಲಂಕಾರಕ್ಕೆ ಅತಿ ಹೆಚ್ಚು ಬಳಕೆಯಾಗುವ ಸುಗಂಧರಾಜ 100 ರೂಪಾಯಿಯಿಂದ 360 ರೂಪಾಯಿಗೆ ಹಾಗೂ ಗುಲಾಬಿ ಹೂವಿನ ದರ 160 ರೂಪಾಯಿಯಿಂದ 400 ರೂಪಾಯಿಗೆ ಏರಿಕೆಯಾಗಿದೆ. ಹಬ್ಬದ ಪೂಜೆಗೆ ಅನಿವಾರ್ಯವಾಗಿರುವ ಶಾವಂತಿಗೆ ಒಂದು ಮಾರಿಗೆ 80 ರೂಪಾಯಿಯಿಂದ 200 ರೂಪಾಯಿಗೆ ತಲುಪಿದ್ದು, 60 ರೂಪಾಯಿ ಇದ್ದ ಚೆಂಡು ಹೂವು 120 ರೂಪಾಯಿಗೆ ದುಪ್ಪಟ್ಟಾಗಿದೆ. ಇನ್ನು ಪೂಜೆಗೆ ಬೇಕಿರುವ ತುಳಸಿ ಹಾರದ ಬೆಲೆ 80 ರೂಪಾಯಿಯಿಂದ 200 ರೂಪಾಯಿಗೆ ಹಾಗೂ 50 ರೂಪಾಯಿಯ ಸಾಮಾನ್ಯ ಹಾರಗಳು 150 ರೂಪಾಯಿಗೆ ಮಾರಾಟವಾಗುತ್ತಿವೆ.
ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವುದು ಹಾಗೂ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಹೂವಿನ ಆವಕ ಬಾರದಿರುವುದೇ ಈ ದಿಢೀರ್ ದರ ಏರಿಕೆಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ದರ ಎಷ್ಟೇ ದುಬಾರಿಯಾದರೂ ಹಬ್ಬದ ಆಚರಣೆ ಮತ್ತು ಪೂಜೆಗೆ ಹೂವು ಅನಿವಾರ್ಯವಾಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಹಣ ನೀಡಿ ಖರೀದಿಸುತ್ತಿದ್ದಾರೆ. ಒಟ್ಟಿನಲ್ಲಿ ಹಬ್ಬದ ಸಂಭ್ರಮದ ನಡುವೆ ಹೂವಿನ ಬೆಲೆ ಏರಿಕೆಯು ಮಧ್ಯಮ ವರ್ಗದ ಜನರ ಬಜೆಟ್‌ಗೆ ದೊಡ್ಡ ಹೊಡೆತ ನೀಡಿದೆ.

ಹಣ್ಣುಗಳಿಗೂ ತಟ್ಟಿದ ಬಿಸಿ

ಹೂವಿನ ಬೆನ್ನಲ್ಲೇ ಹಣ್ಣುಗಳ ದರದಲ್ಲೂ ಭಾರಿ ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಸೇಬು ಕೆ.ಜಿ.ಗೆ 250 ರೂ., ಸೀಬೆಹಣ್ಣು 140 ರೂ., ದಾಳಿಂಬೆ 160 ರೂ. ರಿಂದ 220 ರೂ. ಹಾಗೂ ಮೂಸಂಬಿ 130 ರವರೆಗೆ ಮಾರಾಟವಾಗುತ್ತಿದೆ. ಪೂಜೆಗೆ ಪ್ರಮುಖವಾದ ಏಲಕ್ಕಿ ಬಾಳೆಹಣ್ಣು ಡಜನ್‌ಗೆ 20 ರಿಂದ 60ಕ್ಕೆ ತಲುಪಿದೆ. ಮಾರುಕಟ್ಟೆಗೆ ನಿರೀಕ್ಷಿತ ಆವಕ ಬಾರದಿರುವುದು ಹಾಗೂ ಹಬ್ಬದ ಹೆಚ್ಚಿನ ಬೇಡಿಕೆಯೇ ಈ ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಸಿದ್ದತೆ

ಬೆಲೆ ಏರಿಕೆಯ ಬಿಸಿಯ ನಡುವೆಯೂ ಸಿರಿದೇವಿಯ ಸ್ವಾಗತಕ್ಕೆ ಸಿದ್ಧತೆಗಳು ಜೋರಾಗಿವೆ. ಮಹಿಳೆಯರು ಮನೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಲಕ್ಷ್ಮಿ ಮುಖವಾಡ, ಕಳಶ, ಪೂಜಾ ದ್ರವ್ಯಗಳು ಹಾಗೂ ನೂತನ ವಸ್ತ್ರಗಳ ಖರೀದಿಯಲ್ಲಿ ತೊಡಗಿದ್ದಾರೆ. ದರ ದುಬಾರಿಯಾಗಿದ್ದರೂ ಧನ-ಧಾನ್ಯ ಪ್ರದಾಯಿನಿ ಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಜನರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದು, ಜಿಲ್ಲಾದ್ಯಂತ ಭಕ್ತಿಭಾವ ಕಳೆಗಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net