ಹೂಬಿಟ್ಟು ಕಂಗೊಳಿಸುತ್ತಿವೆ ಮಾಮರ

ಹೊಸಪೇಟೆ ತಾಲೂಕಿನ ಕಮಲಾಪುರ ಭಾಗದಲ್ಲಿ ಮಾವಿನ ಮರದಲ್ಲಿ ಹೂವು ಬಿಟ್ಟಿರುವುದು.
ಹೊಸಪೇಟೆ ತಾಲೂಕಿನ ಕಮಲಾಪುರ ಭಾಗದಲ್ಲಿ ಮಾವಿನ ಮರದಲ್ಲಿ ಹೂವು ಬಿಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಜಿಲ್ಲೆಯಲ್ಲಿ 571 ಹೆಕ್ಟೇರ್‌ನಲ್ಲಿ ಮಾವುಬೆಳೆ
  • ಚಳಿಯ ತೇವಾಂಶ ಬೆಳೆಗೆ ಪೂರಕ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಹಣ್ಣುಗಳ ರಾಜ ಎಂಬ ಖ್ಯಾತಿ ಪಡೆದಿರುವ ಮಾವು, ಈ ಬಾರಿ ಉತ್ತಮ ಮಳೆ, ಚಳಿಯ ಕಾರಣಕ್ಕೆ ಮರಗಳ ತುಂಬಾ ಹೂವು ಬಿಟ್ಟು ಕಂಗೊಳಿಸುತ್ತಿವೆ. ಉತ್ತಮ ಬೆಳೆಯ ಕಾರಣಕ್ಕೆ ಬೆಳೆಗಾರರಿಗೆ ಬಂಪರ್ ಇಳುವರಿಯ ನಿರೀಕ್ಷೆಯನ್ನು ಮೂಡಿಸಿದೆ.
ವಿಜಯನಗರ ಜಿಲ್ಲೆಯಲ್ಲಿ 570.236 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಹೊಸಪೇಟೆ 175.38 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹಗರಿಬೊಮ್ಮನಹಳ್ಳಿ 171.40 ಹೆಕ್ಟೇರ್ ಪ್ರದೇಶ, ಹರಪನಹಳ್ಳಿ131.03 ಹೆಕ್ಟೇರ್ ಪ್ರದೇಶ, ಕೂಡ್ಲಿಗಿ 40.40 ಹೆಕ್ಟೇರ್ ಪ್ರದೇಶ, ಹೂವಿನಹಡಗಲಿ 39.80 ಹೆಕ್ಟೇರ್ ಪ್ರದೇಶ, ಕೊಟ್ಟರು 14.35 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಮರಗಳು ಭರಪೂರ ಹೂವು, ಕಾಯಿ, ಈಚುಗಳನ್ನು ಬಿಟ್ಟು ನಳನಳಿಸುತ್ತಿವೆ. ಜಿಲ್ಲೆಯಲ್ಲಿ ಸರಾಸರಿ 8 ಸಾವಿರ ಮೆಟ್ರಿಕ್ ಟನ್‌ಗೂ ಅಧಿಕ ಮಾವು ಉತ್ಪಾದನೆ ಮಾಡಲಾಗುತ್ತದೆ. 38.05 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ. ಹಿಂಗಾರು ಮಳೆ ಬಾರದೆ ಇರುವುದು ಹಾಗೂ ಹೆಚ್ಚಿನ ಚಳಿಯ ವಾತಾವರಣದಿಂದಾಗಿ ಭೂಮಿಯಲ್ಲಿ ತೇವಾಂಶ ಇರುವುದರಿಂದ ಗಿಡಗಳಲ್ಲಿ ಹೂವಿನ ಪ್ರಮಾಣ ಹೆಚ್ಚಾಗಿದೆ. ಜತೆಗೆ ಯಾವುದೇ ರೋಗಬಾಧೆ ಕಾಣಿಸದೇ ಇರುವುದರಿಂದ ಮಾವು ಬೆಳೆಗಾರರು ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಬಾರಿ ಆರಂಭದಲ್ಲಿ ಹೆಚ್ಚು ಹೆಚ್ಚು ಹೂಬಿಟ್ಟು ರೈತರಿಗೆ ಆಶಾದಾಯಕವನ್ನುಂಟು ಮಾಡಿತ್ತು. ನಂತರ ಕಾಯಿ, ಈಚು ಸಮಯದಲ್ಲಿ ಕ್ರಮೇಣವಾಗಿ ನೆಲಕ್ಕೆ ಉದುರಿ ರೈತರಿಗೆ ನಷ್ಟವನ್ನುಂಟು ಮಾಡಿತ್ತು. ಅಕ್ಟೋಬರ್, ನವೆಂಬರ್ ವೇಳೆಯ ಮಳೆಗೆ ಪುನಃ ಹೂಬಿಟ್ಟು ಮಾವು ಯಥೇಚ್ಚವಾಗಿ ಇಳುವರಿ ಬಂದರೂ ದರ ಕುಸಿತದಿಂದ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿಯೂ ಮಾವಿನ ಗಿಡಗಳು ಈ ಬಾರಿ ಅವಧಿಗೂ ಮುನ್ನವೇ ಹೂವು ಬಿಟ್ಟಿದ್ದು, ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಹೂ ಕಾಯಿಗಟ್ಟುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಮಾವು ಬೆಳೆಗಾರರು ಮಾವಿನ ಹೂವು ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಹೂವನ್ನು ಹೆಚ್ಚು ಉಳಿಸಿಕೊಂಡರೆ ಮಾತ್ರ ಬಂಪರ್ ಬೆಳೆ ಸಾಧ್ಯ. ಹೀಗಾಗಿ ನಿಯಮಿತವಾಗಿ ಔಷಧೋಪಚಾರ ಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೂ ರಕ್ಷಣೆಗೆ ಆದ್ಯತೆ

ಸದ್ಯ ಜಿಲ್ಲೆಯ ಮಾವಿನ ತೋಟಗಳಲ್ಲಿ ರೋಗ ಕಾಣಿಸಿಕೊಂಡಿಲ್ಲ. ಮಾವು ಬೆಳೆಗಾರರು ಮಾವಿನ ಹೂ ರಕ್ಷಣೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಪರಾಗಸ್ಪರ್ಶ ನಡೆಯುವ ಸಮಯದಲ್ಲಿ ಯಾವುದೇ ಔಷಧ ಸಿಂಪಡಣೆ ಮಾಡಬಾರದು. ಹೂಗಳ ಪರಾಗಸ್ಪರ್ಶದ ಹಂತದಲ್ಲಿ ಔಷಧ ಸಿಂಪಡಣೆ ಮಾಡುವುದರಿಂದ ಪರಾಗ ಸ್ಪರ್ಶಕ್ಕೆ ಸಹಕರಿಸುವ ಕೀಟಗಳು ಸಾಯುತ್ತವೆ. ಪರಾಗಸ್ಪರ್ಶ ಪರಿಣಾಮಕಾರಿಯಾಗಿ ನಡೆಯದಿದ್ದರೆ ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟುವುದಿಲ್ಲ. ಅದಲ್ಲದೇ, ಹೆಚ್ಚು ನೀರು ಬಿಟ್ಟರೂ ಹೂವುಗಳು ಉದುರುತ್ತವೆ ಎಂದು ತಜ್ಞರ ಸಲಹೆಯಾಗಿದೆ.
"

ಜಿಲ್ಲೆಯಲ್ಲಿ ಈ ಬಾರಿ ಮಾವು ಹೂವುಗಳು ಚೆನ್ನಾಗಿ ಬಿಟ್ಟಿವೆ. ಕಾಯಿ ಕಟ್ಟುವ ಸಮಯದಲ್ಲಿ ಜಿಗಿಹುಳು, ಕಾಯಿಕೊರಕ ರೋಗ ಕಾಣಿಸಬಹುದು. ರೈತರು ಆತಂಕ ಪಡದೆ ವೈಜ್ಞಾನಿಕವಾಗಿ ಸಕಾಲಕ್ಕೆ ಸರಿಯಾಗಿ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಸಲಹೆಯಂತೆ ಔಷಧ ಸಿಂಪಡಿಸಬೇಕು. ಉತ್ತಮ ಶ್ರಮವನ್ನು ಮಾವಿಗೆ ಹಾಕಿದರೆ ಉತ್ತಮ ಇಳುವರಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net