ಹೂವಿನಡಹಗಲಿ: ಪಾಲಕರ ಪರಭಾಷಾ ವ್ಯಾಮೋಹದಿಂದಾಗಿ ಕನ್ನಡ ಮಾತಿನಲ್ಲಿ ಉಳಿದು ಬರವಣೆಗೆಯಲ್ಲಿ ಮರೆಯಾಗುತ್ತಿದೆ ಎಂದು ಎಸ್‌ಆರ್‌ಎಂಪಿಪಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸತೀಶ್ ಪಾಟೀಲ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚಾರಣೆ ಅಂಗವಾಗಿ ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಆರಂಭದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಿಯೇ ಜಾಹೀರಾತನ್ನು ಪ್ರಕಟಿಸಿತ್ತು, ಕನ್ನಡತನವನ್ನು ಉಳಿಸಲು ಸಾಹಿತ್ಯ ಪರಿಷತ್ತು ಪರಭಾಷೆಯ ಸಹಾಯ ಪಡೆದಿತ್ತು ಎಂದರು.
ಕನ್ನಡ ಕಲಿತವರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡ ಕಡ್ಡಾಯ ಮಾಡಬೇಕೆಂಬ ಬೇಡಿಕೆ ಈಡೇರಿಲ್ಲ. ರಾಜ್ಯದಲ್ಲಿ ಎಲ್ಲಿಯೂ ಶುದ್ಧ ಕನ್ನಡವನ್ನು ಮಾತನಾಡುತ್ತಿಲ್ಲ. ಎಲ್ಲ ಭಾಗದಲ್ಲಿ ಪರಭಾಷೆಯ ಪದಗಳು ಕನ್ನಡದಲ್ಲಿ ಸೇರಿಕೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಯುವ ಸಮೂಹಕ್ಕೆ ಕನ್ನಡ ಬೇಡವಾಗುತ್ತಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇನ್ನು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಉಳಿವಿಗಾಗಿ ಮಾಡಬೇಕಾದ ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ. ಪ್ರೌಢ ಶಿಕ್ಷಣದ ನಂತರ ವಿಜ್ಞಾನ, ಗಣಿತ ಸೇರಿದಂತೆ ಇತರ ವಿಷಯಗಳ ಪಠ್ಯಗಳು ಕನ್ನಡದಲ್ಲಿ ದೊರಕುತ್ತಿಲ್ಲ. ಇದರಿಂದಾಗಿ ಇಂಗ್ಲಿಷ್ ಭಾಷೆಯ ಕಲಿಕೆ ಅನಿವಾರ್ಯವಾಗುತ್ತಿದೆ ಎಂದರು.
ಬಿಜಿಆರ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ವೈ.ಚಂದ್ರಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಉಳಿವಿಗೆ ನಾವು ಮಾಡಬೇಕಾದ ಕರ್ತವ್ಯಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು. ಶಿಕ್ಷಕ ದ್ವಾರಕೀಶ ರೆಡ್ಡಿ, ಗ್ರಾಪಂ ನಿವೃತ್ತ ಕಾರ್ಯದರ್ಶಿ ಬಿದರಹಳ್ಳಿ ಚನ್ನವೀರಪ್ಪ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಸಹಾಯಕ ಪ್ರಾಧ್ಯಾಪಕರಾದ ಬಸವರಾಜ ಪೂಜಾರ, ಸಂದೀಪ ಎಎಂಪಿ, ಮಧುಸೂದನ, ಕಸಾಪ ತಾಲೂಕು ಘಟಕದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇತರರಿದ್ದರು.