ಕಾಲುವೆಗೆ ನೀರು ಬಂದ್ರು ರೈತರ ಕಣ್ಣಲ್ಲಿ ಕಣ್ಣೀರು

ಎಐ ಚಿತ್ರ
ಎಐ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಕಾಲುವೆಗಳಲ್ಲಿ ಆಂಧ್ರ ಪಾಲು ಕಣ್ಣಾಮುಚ್ಚಾಲೆ
  • ಟೇಲೆಂಡ್‌ಗೆ ತಲುಪದ ನೀರು, ರೈತರ ಆತಂಕ
ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಯಾಗಿದ್ದರೂ ಆಂಧ್ರಪ್ರದೇಶದ ಪಾಲಿನ ನೀರಿನ ಬಿಡುಗಡೆಯಲ್ಲಿ ಉಂಟಾಗಿರುವ ಗೊಂದಲದಿAದಾಗಿ, ಕಾಲುವೆಯ ಕೊನೆಯ ಭಾಗದ (ಟೇಲೆಂಡ್) ಜಮೀನುಗಳಿಗೆ ನೀರು ತಲುಪುವುದೇ ಅನುಮಾನವಾಗಿದೆ. ಪರಿಣಾಮವಾಗಿ ರಾಜ್ಯದ ಗಡಿ ಭಾಗದ ರೈತರು ಕಂಗಾಲಾಗಿದ್ದು, ಮುಂಗಾರು ಹಂಗಾಮಿನ ಬೆಳೆ ರಕ್ಷಣೆಯ ಚಿಂತೆಯಲ್ಲಿ ದಿನದೂಡುವಂತಾಗಿದೆ.
ಜಲಾಶಯದ ಬಲದಂಡೆಯ ಕೆಳಮಟ್ಟದ (ಎಲ್‌ಎಲ್‌ಸಿ) ಮತ್ತು ಮೇಲ್ಮಟ್ಟದ (ಎಚ್‌ಎಲ್‌ಸಿ) ಕಾಲುವೆಗಳಿಗೆ ಆ. 11ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯಂತೆ ನೀರು ಹರಿಸಲಾಗುತ್ತಿದೆ. ಆದರೆ, 73 ವರ್ಷಗಳ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಉಭಯ ರಾಜ್ಯಗಳ ಪಾಲಿನ ನೀರನ್ನು ಜಂಟಿಯಾಗಿ ಹರಿಸದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಎರಡೂ ರಾಜ್ಯಗಳ ಪಾಲಿನ ನೀರು ಒಟ್ಟಿಗೆ ಹರಿದಾಗ ನೀರಿನ ಒತ್ತಡ ಹೆಚ್ಚಾಗಿ ಕೊನೆಯ ಭಾಗದವರೆಗೂ ಸರಾಗವಾಗಿ ತಲುಪುತ್ತದೆ.

ಇಂಡೆAಟ್ ಸಲ್ಲಿಸದ ಆಂಧ್ರ

ಪ್ರಸ್ತುತ ಜಲಾಶಯದಿಂದ ಕರ್ನಾಟಕ ಪಾಲಿನಲ್ಲಿ ಎಚ್‌ಎಲ್‌ಸಿಗೆ 1,200 ಕ್ಯೂಸೆಕ್ ಹಾಗೂ ಎಲ್‌ಎಲ್‌ಸಿಗೆ ಕೇವಲ 650 ಕ್ಯೂಸೆಕ್ ನೀರನ್ನು ಮಾತ್ರ ಹರಿಸಲಾಗುತ್ತಿದೆ. ಎಲ್‌ಎಲ್‌ಸಿ ಕಾಲುವೆಯಲ್ಲಿ ಕನಿಷ್ಠ 1,500 ಕ್ಯೂಸೆಕ್ ನೀರು ಹರಿಸಿದರೆ ಮಾತ್ರ ಕರ್ನಾಟಕ ವ್ಯಾಪ್ತಿಯ 155ನೇ ಕಿ.ಮೀ. ಹಾಗೂ ಆಂಧ್ರ ಗಡಿಯವರೆಗಿನ ಜಮೀನುಗಳಿಗೆ ತಲುಪಲು ಸಾಧ್ಯ. ಆಂಧ್ರಪ್ರದೇಶವು ಕೃಷಿಗಾಗಿ ಇನ್ನೂ ಅಧಿಕೃತ ಇಂಡೆAಟ್ (ಬೇಡಿಕೆ ಪತ್ರ) ಸಲ್ಲಿಸದೆ, ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ನೀರು ಪಡೆಯುತ್ತಿದೆ. ಎಚ್‌ಎಲ್‌ಸಿಗೆ ಆಂಧ್ರದ 1500 ಕ್ಯೂಸೆಕ್ ಸೇರಿ ಒಟ್ಟು 2,700 ಕ್ಯೂಸೆಕ್ ಹರಿಯುತ್ತಿದ್ದರೂ, ಎಲ್‌ಎಲ್‌ಸಿಗೆ ನೀರಿನ ಪ್ರಮಾಣ ತೀರಾ ಕಡಿಮೆಯಿದೆ.

ರೈತರ ಆಗ್ರಹ

ಈಗಾಗಲೇ ಮುಂಗಾರು ಬಿತ್ತನೆ ಒಂದು ತಿಂಗಳು ತಡವಾಗಿದ್ದು, ಕಾಲುವೆಯಲ್ಲಿ ನೀರಿನ ಹರಿವು ಕಡಿಮೆಯಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಎರಡೂ ರಾಜ್ಯಗಳ ಪಾಲಿನ ನೀರು ಜಂಟಿಯಾಗಿ ಹರಿಯುತ್ತಿದ್ದರಿಂದ ಯಾವುದೇ ಕೊರತೆಯಾಗುತ್ತಿರಲಿಲ್ಲ. ಈಗ ರಾಜ್ಯದ ಜನಪ್ರತಿನಿಧಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಆಂಧ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕಾಲುವೆಗಳಿಗೆ ಪೂರ್ಣ ಪ್ರಮಾಣದ ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
"

ಆಂಧ್ರದಿAದ ಇನ್ನೂ ಅಧಿಕೃತ ಇಂಡೆAಟ್ ಬಂದಿಲ್ಲ, ಕೇವಲ ಕುಡಿಯುವ ನೀರು ಪಡೆಯುತ್ತಿದ್ದಾರೆ. ಅಲ್ಲಿನ ಐಸಿಸಿ ಸಭೆ ಬಳಿಕ ಇಂಡೆAಟ್ ಬಂದರೆ ಪೂರ್ಣ ಪ್ರಮಾಣದ ನೀರು ಬಿಡಲಾಗುವುದು.- ನಾರಾಯಣ ನಾಯ್ಕ, ಅಧೀಕ್ಷಕ ಎಂಜಿನಿಯರ್, ಟಿಬಿಬೋರ್ಡ್, ಹೊಸಪೇಟೆ

— ನಾರಾಯಣ ನಾಯ್ಕ, ಅಧೀಕ್ಷಕ ಎಂಜಿನಿಯರ್, ಟಿಬಿಬೋರ್ಡ್, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net