ಹೊಸಪೇಟೆ: ತಾಲೂಕಿನ ಕಮಲಾಪುರ ಪಟ್ಟಣದ 20ನೇ ವಾರ್ಡ್ ವ್ಯಾಪ್ತಿಯ ಕೆರೆತಾಂಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವಂತೆ ಎಸ್‌ಡಿಎಂಸಿಯಿಂದ ಬಿಇಒ ಉಮಾಪತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಎಸ್‌ಎಸ್.ನಾಯ್ಕ ಮಾತನಾಡಿ, ಪ್ರಸ್ತುತ ಈ ಶಾಲೆಯಲ್ಲಿ ಒಂದರಿಂದ 5ನೇ ತರಗತಿವರೆಗೆ ಮಾತ್ರ ಶಿಕ್ಷಣ ಲಭ್ಯವಿದೆ. ತಾಂಡಾದಲ್ಲಿ 4ರಿಂದ 5 ವರ್ಷ ವಯಸ್ಸಿನ 50ಕ್ಕೂ ಹೆಚ್ಚಿನ ಮಕ್ಕಳಿದ್ದಾರೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಸುಮಾರು 1.5 ಕಿಲೋಮೀಟರ್ ನಿಂದ ಎರಡು ಕಿಲೋಮೀಟರ್ ದೂರವಿರುವ ಪಟ್ಟಣದ ಶಾಲೆಗಳಿಗೆ ನಡೆದುಕೊಂಡು ತೆರಳಬೇಕಾದ ಅನಿವಾರ್ಯತೆ ಇದೆ. ಪ್ರತಿದಿನ ಮಕ್ಕಳನ್ನು ಅಷ್ಟು ದೂರ ಕರೆದುಕೊಂಡು ಹೋಗಿ ಕರೆತರಲು ಪೋಷಕರು ಮತ್ತು ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಡ ಕುಟುಂಬಗಳ ಹಲವು ಪೋಷಕರಿಗೆ ಹೋಗಿ ಬರಲು ಸಾಧ್ಯವಾಗದೆ, ಪುಟ್ಟ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಶಿಕ್ಷಣ ಇಲಾಖೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಕೆರೆತಾಂಡ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಿ, ಅಗತ್ಯ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.