ಜಿಲ್ಲೆಯ ಶಾಲಾ ಕಾಲೇಜುಗಳು, ವಿವಿಧ ಬಡಾವಣೆಗಳಲ್ಲಿ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು. ಕೃಷ್ಣ ಮತ್ತು ರಾಧೆಯ ವೇಷ ತೊಟ್ಟ ಪುಟಾಣಿ ಮಕ್ಕಳ ಛದ್ಮವೇಷ ಸ್ಪರ್ಧೆಗಳು ಹಬ್ಬದ ರಂಗನ್ನು ಹೆಚ್ಚಿಸಿದವು. ನಗರ ಮಾತ್ರವಲ್ಲದೆ ಹಂಪಿ, ಕಮಲಾಪುರ, ಹರಪನಹಳ್ಳಿ, ಕೊಟ್ಟೂರು ಹಾಗೂ ಹೂವಿನಹಡಗಲಿ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ಎಲ್ಲ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಕಡೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.