ಹೊಸಪೇಟೆ ಟಿ.ಬಿ.ಡ್ಯಾಂ ಬಳಿಯ ಶ್ರೀ ವಿಜಯ ಮಹಾಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಟಿ.ನಾಗರಾಜ, ಜಿಲ್ಲಾ ಉಪಾಧ್ಯಕ್ಷ ಎಂ.ಜಡಿಯಪ್ಪ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ಬಿ.ವಿ.ಗೌಡ, ರೇವಣಸಿದ್ದಪ್ಪ, ಮೂರ್ತಿ, ಸುರೇಶ್, ವೆಂಕಟೇಶ್, ಚಿನ್ನದೊರೆ, ಪರಸಪ್ಪ ಇತರರಿದ್ದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಿಂದ ಪ್ರಾರ್ಥನೆ
ಹೊಸಪೇಟೆ: ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಹೊರವಲಯದ ಟಿ.ಬಿ.ಡ್ಯಾಂ ಬಳಿಯ ಶ್ರೀ ವಿಜಯ ಮಹಾಗಣಪತಿ ದೇಗುಲದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ರೈತ ಸಂಘದ ಪದಾಧಿಕಾರಿಗಳು ದೇಗುಲದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಿ, ವರುಣ ದೇವನ ಕೃಪೆಗಾಗಿ ಪ್ರಾರ್ಥಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ತುಂಗಭದ್ರಾ ಜಲಾಶಯದಲ್ಲಿ ನೀರಿಲ್ಲದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ದೇವರಿಗೆ ಮೊರೆ ಹೋಗಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದರು.
ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ತಕ್ಷಣವೇ ಬರಗಾಲ ಘೋಷಣೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಿ, ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಜಲಾಶಯ ನಂಬಿಕೊAಡು ಬಿತ್ತನೆ ಮಾಡಬಾರದು ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ರೈತರು ಬಿತ್ತನೆ ಮಾಡದಿದ್ದರೆ ಹೊಟ್ಟೆಗೆ ಏನು ಮಣ್ಣು ತಿನ್ನಬೇಕಾ? ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.