ಹೊಸಪೇಟೆ ಜೋಳದ ರಾಶಿ ಗುಡ್ಡದ ಮೇಲೆ ಮಳೆಗಾಗಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಗೊರವಪ್ಪರಿಂದ ಕಂಬಳಿ ಬೀಸಲಾಯಿತು. ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಪಿ.ವಿ. ವೆಂಕಟೇಶ್, ಸಮಿತಿಯ ಉಪಾಧ್ಯಕ್ಷ ಗುಜ್ಜಲ ಗಣೇಶ್, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಪ್ರಮುಖರಾದ ಜಿ.ನೀಲಕಂಠ, ಬಿ.ಪಂಪಾಪತಿ ನಾಯಕ, ಗುಂಡಿ ರಮೇಶ್, ಹನುಮಂತಪ್ಪ ಹಾಗೂ ಶೇಕ್ಷಾವಲಿ ಇತರರಿದ್ದರು.
ಹೊಸಪೇಟೆ: ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಪದಾಧಿಕಾರಿಗಳು ನಗರದ ಹೊರವಲಯದ ಜೋಳದ ರಾಶಿ ಗುಡ್ಡದ ಮೇಲೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಆಕಾಂಕ್ಷಿಸಿ, ಗೊರವಪ್ಪರಿಂದ ಕಂಬಳಿ ಬೀಸಿ, ಭಂಡಾರ ತೂರಿ ಹಾಗೂ ಡೊಳ್ಳು ಬಾರಿಸುವ ಮೂಲಕ ಮಳೆರಾಯನಿಗೆ ವಿಶಿಷ್ಟವಾಗಿ ಮೊರೆ ಹೋಗಲಾಯಿತು.
ಈ ವೇಳೆ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಪಿ.ವಿ. ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಮೊದಲು ನಗರದ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಜೋಳದ ರಾಶಿ ಗುಡ್ಡದ ಮೇಲೆ ಗೊರವಯ್ಯ ಗುಡ್ಡದ ಮಲ್ಲಯ್ಯ ಅವರ ನೇತೃತ್ವದಲ್ಲಿ ವಿಶೇಷ ಆರಾಧನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಭವಿಷ್ಯ ನುಡಿದ ಗೊರವಯ್ಯ ಗುಡ್ಡದ ಮಲ್ಲಯ್ಯ ಅವರು, ಮಳೆಗಾಗಿ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ವಿಶ್ವಾಸ ವ್ಯಕ್ತಪಡಿಸಿದರು.