ಸಣ್ಣ ಉದ್ಯಮಗಳ ಆರಂಭ ಅಗತ್ಯ

ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆ’ ವಿಚಾರಸಂಕಿರಣದಲ್ಲಿ ವಿಎಸ್‌ಕೆ ವಿವಿ ಕುಲಪತಿ ಎಂ.ಮುನಿರಾಜು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆ’ ವಿಚಾರಸಂಕಿರಣದಲ್ಲಿ ವಿಎಸ್‌ಕೆ ವಿವಿ ಕುಲಪತಿ ಎಂ.ಮುನಿರಾಜು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
Published on
ಹೂವಿನಹಡಗಲಿ: ಇಂದಿನ ಪೀಳಿಗೆಗೆ ಉದ್ಯೋಗ ಸೃಷ್ಟಿಸುವುದರೊಂದಿಗೆ ಕೌಶಲಾಧಾರಿತ ಶಿಕ್ಷಣದಿಂದ ಅಸಮಾನತೆ ಹೋಗಲಾಡಿಸಬಹುದು ಎಂದು ವಿಎಸ್‌ಕೆ ವಿವಿ ಕುಲಪತಿ ಎಂ.ಮುನಿರಾಜು ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನೆ (ಉತ್ತರ ಕರ್ನಾಟಕದ ಅಭಿವೃದ್ಧಿಯ ಸವಾಲುಗಳು ಮತ್ತು ಅವಕಾಶಗಳು)’ ಎಂಬ ವಿಷಯದ ಕುರಿತ ವಿಚಾರಸಂಕಿರಣದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಜಾತಿ, ಆದಾಯ, ಅರ್ಹತೆ ಕುರಿತು ಭೇದ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿವರೆಗೂ ಉಚಿತ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಾಗ ಅಸಮಾನತೆ ಹೋಗಲಾಡಿಸಬಹುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕರು ವ್ಯವಹಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಅನೇಕ ವಿಷಯಗಳನ್ನು ಆರಂಭ ಮಾಡಲಾಗಿದೆ. ಈ ಭಾಗದಲ್ಲಿ ಒಂದು ಮನೆಯಲ್ಲಿ ಒಬ್ಬ ವಿದ್ಯಾವಂತ ಉನ್ನತ ಹುದ್ದೆ ಪಡೆದರೆ ಆ ಮನೆಯ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರಕುತ್ತವೆ. ಅಸಮತೋಲ ನಿವಾರಿಸಲು ಪ್ರಾದೇಶಿಕವಾಗಿ ಸಣ್ಣ ಪ್ರಮಾಣದ ಉದ್ಯಮಗಳನ್ನು ಆರಂಭಿಸಬೇಕು ಎಂದರು.
ರಾಜ್ಯ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ ಸದಸ್ಯೆ ಡಾ.ಸಂಗೀತ ಕಟ್ಟಿಮನಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅನೇಕ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಾಲೆಗೆ ಬೆಳಗ್ಗೆ ಊಟ ಮಾಡದೆ ಬರುತ್ತಿದ್ದಾರೆ. ಅಂದರೆ ಅವರಿಗೆ ಮಧ್ಯಾಹ್ನದ ಊಟವೇ ಮೊದಲ ಊಟವಾಗಿರುತ್ತದೆ. ಇದು ಆರ್ಥಿಕ ಅಸಮಾನತೆಯನ್ನು ತೋರಿಸುತ್ತದೆ. ನಗರ ಪ್ರದೇಶದಲ್ಲಿ ಖಾಸಗಿ ಕಂಪನಿಗಳು ಯಾವುದೇ ಬಂಡವಾಳವಿಲ್ಲದೆ ರಾಜ್ಯಕ್ಕೆ ಬಂದು ಕಲಿತವರಿಂದ ಕೆಲಸ ಪಡೆದು ಸಂಬಳ ನೀಡುತ್ತಿವೆ. ನಮ್ಮಲ್ಲಿ ನಾವೇ ಉದ್ಯಮವನ್ನು ಆರಂಭಿಸುವ ಕೌಶಲ ಕಲಿಯಬೇಕಿದೆ ಎಂದರು.
ವೀ.ವಿ.ಸಂಘ ಕಾರ್ಯದರ್ಶಿ ಡಾ.ಅರವಿಂದ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು. ವಿಚಾರ ಸಂಕಿರಣದಲ್ಲಿ ಉತ್ತರ ಕರ್ನಾಟಕದ ಪದವೀಧರರಲ್ಲಿ ಕೌಶಲ ಅಂತರ ಮತ್ತು ಉದ್ಯೋಗಾವಕಾಶಗಳು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳು ಕಾಲೇಜು ಬಿಡುವ ಪ್ರಮಾಣ ಎಂಬುದರ ಕುರಿತು ಗೋಷ್ಠಿಗಳು ನಡೆದವು.
ಶಾಸಕ ಕೃಷ್ಣನಾಯ್ಕ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟೆ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ ರೆಡ್ಡಿ, ಪ್ರಾಚಾರ್ಯ ಎಸ್.ಎಸ್.ಪಾಟೀಲ, ಪ್ರಾಧ್ಯಾಪಕರಾದ ಡಾ.ವೈ.ಚಂದ್ರಬಾನು, ಡಾ.ಮಹಿಮಾ ಜ್ಯೋತಿ, ಷೇಕ್ಷಾವಲಿ, ಬಡೇಸಾಬ ನಾಯಕ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net