ಕೊಟ್ಟೂರು: ಪಟ್ಟಣದ ಜನರು ನಾಟಕ, ಸಂಗೀತ ಹಾಗೂ ಇತರ ವಿವಿಧ ಸಾಂಸ್ಕೃತಿಕ ಕಲಾವಿದರನ್ನ ಸದಾ ಬೆಂಬಲಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಮಾಜಿ ಸಚಿವ ಎನ್.ಎಂ.ನಬಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಲಾ ಕೇಂದ್ರದಿಂದ ಆಯೋಜಿಸಿದ್ದ ಸಂಗೀತ ಹಾಗೂ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಅಖಂಡ ಬಳ್ಳಾರಿ ಜಿಲ್ಲೆಯ ಪೈಕಿ ಹೂವಿನಹಡಗಲಿಯಲ್ಲಿ ಎಂ.ಪಿ.ಪ್ರಕಾಶ ಹಾಗೂ ಕೊಟ್ಟೂರಿನಲ್ಲಿ ಎಂ.ಎಂ.ಜೆ.ಸತ್ಯಪ್ರಕಾಶ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು. ಈ ಭಾಗದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಕಲಾ ಸಂಸ್ಕೃತಿಯನ್ನು ಉಳಿಸಬೇಕೆಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ಎಂ ದಾರುಕೇಶ್ ಮಾತನಾಡಿ, ಸಂಗೀತ, ನಾಟಕಗಳು ಶಾಂತಿ, ನೆಮ್ಮದಿ ಹಾಗೂ ಆರೋಗ್ಯ ವೃದ್ಧಿಸುವ ಶಕ್ತಿ ಹೊಂದಿವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಇದರಿಂದಾಗಿ ಪಟ್ಟಣದ ಜನರು ನಾಲ್ಕು ದಿನ ನಡೆಯಲಿರುವ ಸಂಗೀತ ಹಾಗೂ ನಾಟಕೋತ್ಸವ ವೀಕ್ಷಿಸಬೇಕು ಎಂದರು.
ಹೂವಿನಹಡಗಲಿಯ ಪ್ರಕಾಶ ಜೈನ್ ಮತ್ತು ತಂಡ ಸುಗಮ ಸಂಗೀತ ಹಾಗೂ ಸಾಣೆಹಳ್ಳಿ ಶಿವಸಂಚಾರ ತಂಡದ ಕಲಾವಿದರು ‘ಜಂಗಮದೆಡೆಗೆ’ ನಾಟಕ ಪ್ರದರ್ಶಿಸಿದರು.
ಕಲಾಕೇಂದ್ರದ ಅಧ್ಯಕ್ಷ ಎಂ.ಎಂ.ಜೆ.ಸತ್ಯಪ್ರಕಾಶ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ತಗ್ಗಿನಮಠ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಂ ಚಂದ್ರಶೇಖರಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅನಿಲ್ ಹೊಸಮನಿ ಉಪಸ್ಥಿತರಿದ್ದರು.