ಪ್ರೇಮ ಪಾಶಕ್ಕೆ ಗ್ರಾಮೀಣ ಬಾಲಕಿಯರು ಬಲಿ Rural girls

ಪ್ರೇಮ ಪಾಶ
ಪ್ರೇಮ ಪಾಶ
Published on

ಪ್ರಮುಖ ಮುಖ್ಯಾಂಶಗಳು

  • ಬಾಲ್ಯವಿವಾಹಗಳ ಸಂಖ್ಯೆ ಕ್ರಮೇಣ ಕಡಿಮೆ
  • ಹೂವಿನಹಡಗಲಿ ತಾಲೂಕಿನಲ್ಲಿ ಆತಂಕಕಾರಿ ಬೆಳವಣಿಗೆ
  • ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗುತ್ತಿರುವುದು ಕಳವಳ
ಮಧುಸೂದನ ಕೆ. ಹೂವಿನಹಡಗಲಿ
ಸರ್ಕಾರದ ವಿವಿಧ ಇಲಾಖೆಗಳ ಜಾಗೃತಿಯಿಂದಾಗಿ ಬಾಲ್ಯವಿವಾಹಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದ್ದರೂ ಬಾಲಗರ್ಭಿಣಿಯರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಗ್ರಾಮೀಣ ಭಾಗಗಳಿಂದ ತಾಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆಂದು ಬರುವ ಹಾಗೂ ದೂರದ ಊರುಗಳಿಗೆ ಕೂಲಿ ಕೆಲಸಗಳಿಗೆ ತೆರಳುವ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರಾಗುತ್ತಿರುವುದು ಕಳವಳದ ಸಂಗತಿಯಾಗಿದೆ.
ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ 22 ಹಾಗೂ 2024-25ನೇ ಸಾಲಿನಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಆದರೆ ಬಾಲಗರ್ಭಿಣಿಯರ ನಿಖರ ಸಂಖ್ಯೆ ಸರ್ಕಾರಿ ದಾಖಲೆಗಳಲ್ಲಿ ಸಮರ್ಪಕವಾಗಿ ಸಿಗುತ್ತಿಲ್ಲ. ಅಧಿಕಾರಿಗಳು ತಡೆಯಲು ಶ್ರಮಿಸಿದರೂ ಪ್ರಯೋಜನವಾಗುತ್ತಿಲ್ಲ. ಗ್ರಾಮೀಣ ಬಾಲಕಿಯರು ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬಂದಾಗ ಹಾಗೂ ಕೂಲಿ ಕೆಲಸಕ್ಕಾಗಿ ಹೊರ ಊರುಗಳಿಗೆ ಹೋದಾಗ ಪ್ರೇಮ, ಪ್ರಣಯದ ಬಲೆಗೆ ಬೀಳುತ್ತಿದ್ದಾರೆ.
ಶಾಲಾ, ಕಾಲೇಜುಗಳಲ್ಲಿನ ಪ್ರೇಮ ಪ್ರಕರಣಗಳೇ ಬಾಲಕಿಯರು ಗರ್ಭಿಣಿಯರಾಗಲು ಪ್ರಮುಖ ಕಾರಣವಾಗುತ್ತಿದೆ. ಪಾಲಕರ ವಿರೋಧದ ನಡುವೆಯೂ ಪ್ರೇಮವಿವಾಹವಾಗುವ ಅನೇಕ ಬಾಲಕಿಯರು 18 ವರ್ಷ ತುಂಬುವ ಮುನ್ನವೇ ಗರ್ಭಧರಿಸುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಪಕ್ವವಾಗದ ಬಾಲಕಿಯರು ಸಂಸಾರದ ಜವಾಬ್ದಾರಿ ಹೊರಲಾಗದೆ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಗುಟ್ಟಾಗಿ ನಡೆಯುವ ಬಾಲ್ಯವಿವಾಹ

ಈ ಹಿಂದೆ ಜಾತ್ರೆ, ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹಗಳು ನಡೆಯುತ್ತಿದ್ದವು. ಈಗ ಕಾನೂನು ಕಠಿಣವಾಗಿರುವುದರಿಂದ ಮತ್ತು ಎಲ್ಲ ದಾಖಲೆಗಳನ್ನು ಪರಿಶೀಲಿಸಿಯೇ ಮದುವೆಗೆ ಅವಕಾಶ ನೀಡುತ್ತಿರುವುದರಿಂದ ಬಹಿರಂಗ ಬಾಲ್ಯವಿವಾಹಗಳು ಕಡಿಮೆಯಾಗಿವೆ. ಆದರೆ, ಈಗ ಗ್ರಾಮೀಣ ಭಾಗಗಳಲ್ಲಿ ಹೊಸದೊಂದು ಪದ್ಧತಿ ಶುರುವಾಗಿದೆ. ಮಧ್ಯಮ ಹಾಗೂ ಬಡ ಕುಟುಂಬಗಳು ತಮ್ಮ ಮನೆಯಲ್ಲಿಯೇ ಗುಟ್ಟಾಗಿ ಸಂಬಂಧಿಕರ ನಡುವೆ ಮದುವೆ ನೆರವೇರಿಸುತ್ತಿದ್ದಾರೆ. ಹುಡುಗಿಗೆ 18 ವರ್ಷ ತುಂಬಿದ ಬಳಿಕವಷ್ಟೇ ಗಂಡನ ಮನೆಗೆ ಕಳುಹಿಸುವ ಒಪ್ಪಂದದೊಂದಿಗೆ ಈ ಮದುವೆಗಳು ನಡೆಯುತ್ತಿವೆ.

ಗರ್ಭಪಾತ ಮತ್ತು ಆರೋಗ್ಯ ಸಮಸ್ಯೆ

ಬಾಲಗರ್ಭಿಣಿಯರು ಆಸ್ಪತ್ರೆಗೆ ತೆರಳಿದರೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ ಎಂಬ ಭಯವಿದೆ. ಹೀಗಾಗಿ, ಅನೇಕರು ಸಾಮಾಜಿಕ ಜಾಲತಾಣಗಳ ಮಾಹಿತಿ ಬಳಸಿ, ಔಷಧಗಳನ್ನು ಸೇವಿಸುವ ಮೂಲಕ ಗರ್ಭಪಾತ ಮಾಡಿಕೊಳ್ಳುತ್ತಿದ್ದಾರೆ.
ಬಾಲ್ಯದಲ್ಲಿಯೇ ಗರ್ಭಧರಿಸುವುದರಿಂದ ಹೆರಿಗೆ ಸಮಯದಲ್ಲಿ ರಕ್ತಹೀನತೆ ಉಂಟಾಗಿ ತಾಯಿ ಮತ್ತು ಶಿಶುವಿನ ಸಾವು-ನೋವುಗಳು ಸಂಭವಿಸುತ್ತಿವೆ. ಸರ್ಕಾರದ ಯೋಜನೆಗಳನ್ನು ಪಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿಕಾರ್ಡ್‌ಗೆ ನೋಂದಣಿ ಮಾಡುವ ಸಂದರ್ಭದಲ್ಲಿ ಬಾಲಗರ್ಭಿಣಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ 18 ವರ್ಷದೊಳಗಿನವರಿಗೆ ತಾಯಿಕಾರ್ಡ್ ಹೇಗೆ ನೀಡಲಾಗುತ್ತಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.

ನಮ್ಮ ಇಲಾಖೆಯಿಂದ ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಜನರಲ್ಲಿ ಹೆಚ್ಚಿನ ಜಾಗೃತಿಯನ್ನು ಮೂಡಿಸಲಾಗಿದೆ. ಅದರಿಂದಾಗಿ ಬಾಲ್ಯವಿವಾಹ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ಪ್ರೇಮವಿವಾಹ ಪ್ರಕರಣಗಳನ್ನು ತಡೆಗಟ್ಟಲಾಗುತ್ತಿಲ್ಲ. ಇನ್ನು ಹೊರಜಿಲ್ಲೆಗಳಿಗೆ ಕೂಲಿಕೆಲಸಕ್ಕೆ ತೆರಳಿದ ಬಾಲಕಿಯರು ಗರ್ಭಧರಿಸುತ್ತಿದ್ದಾರೆ. ಶಾಲಾ, ಕಾಲೇಜು ಹಂತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ.

ಪೋಕ್ಸೋ ಕಾಯ್ದೆ ಅನುಷ್ಠಾನಕ್ಕೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳಿರುವ ಟಾಸ್ಕ್‌ಪೋರ್ಸ್ ರಚಿಸಿ ಗ್ರಾಮೀಣ ಭಾಗದಲ್ಲಿ ಗಮನಹರಿಸುವಂತೆ ಸೂಚಿಸಲಾಗಿದೆ. ತಾಲೂಕಿನ ಯಾವುದೇ ಆಸ್ಪತ್ರೆಗಳಲ್ಲಿ ಬಾಲಗರ್ಭಿಣಿ ಪ್ರಕರಣ ಪತ್ತೆಯಾದ ಕೂಡಲೇ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲು ವೈದ್ಯರಿಗೆ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net