ಹಂಪಿ ಸ್ಮಾರಕಗಳ ಪುನಶ್ಚೇತನ ಕಾರ್ಯ

ಹಂಪಿ ಮಹಾನವಮಿ ದಿಬ್ಬದಲ್ಲಿ ಹಳೆ ಕಾಂಕ್ರಿಟ್ ತೆರವು ಕಾರ್ಯ ನಡೆದಿರುವುದು.
ಹಂಪಿ ಮಹಾನವಮಿ ದಿಬ್ಬದಲ್ಲಿ ಹಳೆ ಕಾಂಕ್ರಿಟ್ ತೆರವು ಕಾರ್ಯ ನಡೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವರಾದ ನಿರ್ಮಲ ಸೀತರಾಮ್, ಗಜೇಂದ್ರ ಸಿಂಗ್ ಶೇಖಾವತ್ ಸೂಚನೆ
  • ಮಹಾನವಮಿ ದಿಬ್ಬ, ಹಜಾರರಾಮ ದೇಗುಲದಲ್ಲಿ ಕಾಮಗಾರಿ ಚೂರುಕು
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ರಕ್ಷಣೆ ಹೊಣೆಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ 80 ಲಕ್ಷ ರೂ. ವೆಚ್ಚದಲ್ಲಿ ಎರಡು ಪ್ರಮುಖ ಸ್ಮಾರಕಗಳಲ್ಲಿ ಸಂರಕ್ಷಣಾ ಕಾರ್ಯ ಕಾಮಗಾರಿ ಆರಂಭಿಸಿದೆ.
ಹಂಪಿಯ ಕೆಲ ಸ್ಮಾರಕಗಳು ಮಳೆಗಾಲದಲ್ಲಿ ಬಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ಶಿಥಿಲ ಸ್ಮಾರಕಗಳನ್ನು ಕಬ್ಬಿಣದ ಸಲಾಕೆಗಳನ್ನು ಅಳವಡಿಸಿ ರಕ್ಷಿಸಲಾಗುತ್ತಿದೆ. ಆದರೆ, ಪ್ರಮುಖ ಸ್ಮಾರಕಗಳ ನಿರ್ವಹಣೆ ಕಾರ್ಯ ನಿರ್ಲಕ್ಷö್ಯ ತೋರುತ್ತದೆ. ಜನುವರಿಯಲ್ಲಿ ಹಂಪಿಗೆ ಭೇಟಿ ನೀಡಿದ ವಿತ್ತ ಸಚಿವೆ ನಿರ್ಮಲ ಸೀತರಾಮ್ ಹಾಗೂ ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವು ಇಲ್ಲಿನ ಮೂಲಸೌಕರ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ ಕೆಲ ಸ್ಮಾರಕಗಳ ಪುನಶ್ಚೇತನ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡದರು. ಅದಂತೆ ಹಂಪಿಯ ಮಹಾನವಮಿ ದಿಬ್ಬ ಹಾಗೂ ಹಜಾರಾಮರ ದೇಗುಲದಲ್ಲಿ ಪುನಶ್ಚೇತನ ಕಾರ್ಯ ಭರದಿಂದ ಸಾಗಿದೆ.
ಸುಮಾರು 56 ಲಕ್ಷ ರೂ. ವೆಚ್ಚದಲ್ಲಿ ಹಜಾರರಾಮ ದೇಗುಲ ಆವರಣದ ಕಲ್ಲಿನ ನೆಲಹಾಸನ್ನು ಸರಿಪಡಿಸಲಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಬಿಳಿ ಕಲ್ಲುಗಳನ್ನು ಮರುಜೋಡಣೆ ಮಾಡಲಾಗುತ್ತಿದೆ. ಇಲ್ಲಿನ ಹಳೆಯ ಮತ್ತು ಅಸ್ತವ್ಯಸ್ತವಾಗಿದ್ದ ಕಲ್ಲುಗಳನ್ನು ತೆರವುಗೊಳಿಸಿ, ಬಿಳಿ ಕಲ್ಲಿನ ನೆಲಹಾಸನ್ನು ಪುನಃ ಜೋಡಿಸಲಾಗುತ್ತಿದೆ. ವಿಶೇಷವೆಂದರೆ, ಮಳೆಗಾಲದಲ್ಲಿ ದೇಗುಲದ ಆವರಣದಲ್ಲಿ ನೀರು ನಿಲ್ಲದಂತೆ, ಪ್ರತ್ಯೇಕ ಅಲೈನ್ಮೆಂಟ್ ಮಾಡಲಾಗುತ್ತಿದೆ. ಸುಣ್ಣದ ಕಾಂಕ್ರೀಟ್ ಬೆಡ್ ಮೇಲೆ ಈ ಕಲ್ಲುಗಳನ್ನು ಹಾಸಲಾಗುತ್ತಿದೆ.
14 ಲಕ್ಷ ರೂ., ವೆಚ್ಚದಲ್ಲಿ ಈ ಐತಿಹಾಸಿಕ ವೇದಿಕೆಯನ್ನು ಬಲಪಡಿಸಲಾಗುತ್ತಿದೆ. ಈ ಐತಿಹಾಸಿಕ ವೇದಿಕೆಯು ಮಳೆನೀರಿನಿಂದಾಗಿ ಹಾನಿಗೊಳಗಾಗುತ್ತಿತ್ತು. ಸ್ಮಾರಕದ ಆಯಸ್ಸನ್ನು ಹೆಚ್ಚಿಸಲು ಸ್ಮಾರಕದ ಒಳಗೆ ಮಳೆ ನೀರು ಇಳಿಯುವುದನ್ನು ತಡೆಯಲು, ದಿಬ್ಬದ ಮೇಲ್ಭಾಗದಲ್ಲಿ ಶಿಥಿಲಗೊಂಡಿದ್ದ ಮತ್ತು ಸಡಿಲವಾಗಿದ್ದ ಹಳೆಯ ಸುಣ್ಣದ ಕಾಂಕ್ರೀಟ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ. ಅದರ ಬದಲಿಗೆ, ಹೊಸದಾಗಿ ಸಾಂಪ್ರದಾಯಿಕ ಮಿಶ್ರಣದಿಂದ ಸಿದ್ಧಪಡಿಸಿದ ಸುಣ್ಣದ ಕಾಂಕ್ರೀಟ್ ಮತ್ತು ಸುಣ್ಣದ ಪ್ಲಾಸ್ಟಿಂಗ್ ಲೇಪನವನ್ನು ಮಾಡಲಾಗುತ್ತಿದೆ. ಇದು ವೇದಿಕೆಯನ್ನು ಬಲಪಡಿಸುವುದಲ್ಲದೆ, ಮಳೆ ನೀರು ಬಿರುಕುಗಳ ಮೂಲಕ ಒಳಗೆ ಇಳಿಯುವುದನ್ನು ತಡೆದು ಸ್ಮಾರಕದ ಆಯಸ್ಸನ್ನು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದು, ಎಷ್ಟರ ಮಟ್ಟಿಗೆ ಸ್ಮಾರಕಗಳ ಸಂರಕ್ಷಣೆ ಮತ್ತು ಬಲಪಡಿಸುವ ಕಾರ್ಯವಾಗಲಿದೆ ಎಂದು ಕಾದು ನೋಡಬೇಕಿದೆ.

ಸಾಂಪ್ರದಾಯಿಕ ಕಾಮಗಾರಿ

ಮುಂಗಾರು ಮಳೆ ಸಮೀಪಿಸುತ್ತಿದ್ದಂತೆ ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕಗಳಿಗೆ ಮಳೆಯಿಂದ ಹಾನಿಯಾಗದಂತೆ ತಡೆಯಲು ಸಂರಕ್ಷಣಾ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಮಳೆನೀರು ಸ್ಮಾರಕಗಳ ಬಿರುಕುಗಳ ಮೂಲಕ ಒಳಗೆ ಇಳಿದು ಅಡಿಪಾಯ ಶಿಥಿಲಗೊಳ್ಳುವುದನ್ನು ತಪ್ಪಿಸಲು ಹಾಗೂ ಸ್ಮಾರಕಗಳ ಆಯಸ್ಸನ್ನು ವೃದ್ಧಿಸಲು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಹಜಾರ ರಾಮಚಂದ್ರ ದೇಗುಲ ಮತ್ತು ಮಹಾನವಮಿ ದಿಬ್ಬದ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂರಕ್ಷಣಾ ಕಾರ್ಯದ ವಿಶೇಷವೆಂದರೆ, ಇಲ್ಲಿ ಆಧುನಿಕ ಸಿಮೆಂಟ್ ಬಳಸುತ್ತಿಲ್ಲ. ಬದಲಾಗಿ ವಿಜಯನಗರ ಕಾಲದಲ್ಲಿ ಬಳಸಲಾಗುತ್ತಿದ್ದ ಸುಣ್ಣ, ನದಿ ಮರಳು, ಬೆಲ್ಲ, ಅಳಲೆಕಾಯಿ, ಬೆಲ್ಪತ್ರದ ಹಣ್ಣು ಹಾಗೂ ನದಿ ಬೆಣಚುಕಲ್ಲುಗಳ ಮಿಶ್ರಣವನ್ನೇ ಬಳಸಲಾಗುತ್ತಿದೆ. ಸ್ಮಾರಕಗಳ ನೈಜತೆಯನ್ನು ಕಾಪಾಡಿಕೊಳ್ಳಲು ಈ ಪುರಾತನ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
"

ಹಂಪಿಯ ಸ್ಮಾರಕಗಳ ನೈಜತೆಯನ್ನು ಕಾಪಾಡುವುದು ಮೊದಲ ಆದ್ಯತೆ. ಮಳೆಗಾಲದಲ್ಲಿ ನೀರು ಸ್ಮಾರಕಗಳ ಒಳಗೆ ಇಳಿದು ಅಡಿಪಾಯ ಶಿಥಿಲವಾಗದಂತೆ ತಡೆಯಲು ಮತ್ತು ನೆಲಹಾಸು ಸರಿಪಡಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ಮುಂದಿನ 60 ದಿನಗಳ ಒಳಗಾಗಿ ಪೂರ್ಣಗೊಳಿಸುತ್ತೇವೆ.

— ರಾಮಕೃಷ್ಣರೆಡ್ಡಿ, ಅಧೀಕ್ಷಕರು, ಭಾರತೀಯ ಪುರಾತತ್ವ ಸವೇಕ್ಷಣಾ ಇಲಾಖೆ, ಹಂಪಿ


13 ಮಂಜು 01
13 ಮಂಜು 02
ಹಜಾರರಾಮ ದೇಗುಲ ಆವರಣದಲ್ಲಿ ನೆಲಹಾಸು ಕಾಮಗಾರಿ ನಡೆದಿರುವುದು.
13 ಮಂಜು 03
ರಾಮಕೃಷ್ಣರೆಡ್ಡಿ
==============
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net