ಕೆರೆಗುಡಿಹಳ್ಳಿ-ಚಿಕ್ಕಬಳ್ಳಿ ಮಾರ್ಗದ ರಸ್ತೆ ದುರಸ್ತಿಗೆ ಆಗ್ರಹಿಸಿ ಉಚ್ಚಂಗಿದುರ್ಗದಲ್ಲಿ ಉಪತಹಸೀಲ್ದಾರ್ ಚಂದ್ರಮೋಹನ್ ಹಾಗೂ ಸಾರಿಗೆ ಘಟಕ ವ್ಯವಸ್ಥಾಪಕಿ ಮಂಜುಳಾಗೆ ಮನವಿ ಸಲ್ಲಿಸಲಾಯಿತು.
ಹರಪನಹಳ್ಳಿ: ಅರಸೀಕೆರೆ ಗ್ರಾಮದಿಂದ ಕೆರೆಗುಡಿಹಳ್ಳಿ-ಚಿಕ್ಕಬಳ್ಳಿ ಮಾರ್ಗವಾಗಿ ಮಾದಿಹಳ್ಳಿ- ಉಚ್ಚಂಗಿದುರ್ಗ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗೆ ಆಗ್ರಹಿಸಿ ಉಚ್ಚಂಗಿದುರ್ಗದಲ್ಲಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಸೋಮವಾರ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕೆರೆಗುಡಿಹಳ್ಳಿ ಮತ್ತು ಚಿಕ್ಕಬಳ್ಳಿ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಆಗ್ರಹಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಂಸದ, ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಇದೇ ಉದ್ಧಟತನ ಮುಂದುವರಿದರೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರಸೀಕೆರೆ ಹೋಬಳಿ ಉಪ ತಹಸೀಲ್ದಾರ್ ಚಂದ್ರಮೋಹನ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕುಬೇಂದ್ರ ನಾಯ್ಕ, ಸಾರಿಗೆ ಘಟಕ ವ್ಯವಸ್ಥಾಪಕಿ ಮಂಜುಳಾ, ಹೊಸಕೋಟೆ ಪಿಡಿಒ ಹೇಮಂತ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯನ್ನು ತಾತ್ಕಾಲಿಕವಾಗಿ ಶೀಘ್ರ ದುರಸ್ತಿ ಮಾಡಿಸಲಾಗುವುದು. ಬಸ್‌ಗಳನ್ನು ಸರಿಯಾದ ಸಮಯಕ್ಕೆ ಬಿಡುವುದಾಗಿ ಭರವಸೆ ನೀಡಿದರು.