ಹೂವಿನಹಡಗಲಿ: ನದಿ ಹಾಗೂ ಸರೋವರಗಳಲ್ಲಿರುವ ನೀರುನಾಯಿಗಳು ದೇವಗೊಂಡನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡಿವೆ. ತುಂಗಭದ್ರಾ ನದಿ ತೀರದಲ್ಲಿ ಹೆಚ್ಚಾಗಿ ಕಂಡುಬರುವ ನೀರುನಾಯಿಗಳು ಕೆರೆಯಲ್ಲಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಸಿಂಗಟಾಲೂರು ಏತನೀರಾವರಿ ಯೋಜನೆ ಹಿನ್ನೀರಿನಲ್ಲಿ ಅನೇಕ ಬಾರಿ ನೀರುನಾಯಿಗಳು ಕಾಣಿಸಿಕೊಂಡಿವೆ. ಇದೀಗ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಮೂಲಕ ನೀರಿನಲ್ಲಿ ಹರಿದು ಕೆರೆಗೆ ಬಂದಿವೆ ಎನ್ನಲಾಗಿದೆ. ನೀರುನಾಯಿಗಳು ಉಭಯವಾಸಿಗಳಾಗಿದ್ದು, ನೀರನ್ನು ಸ್ವಚ್ಛಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ನಾಜೂಕು, ಬುದ್ಧಿವಂತ ಪ್ರಾಣಿಗಳಾಗಿದ್ದು, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಇವುಗಳಿಗೆ ಸಂತಾನೋತ್ಪತ್ತಿ ಕಾಲವಾಗಿದೆ. ಕೆರೆಯ ತಟದಲ್ಲಿ ಗೂಡು ಮಾಡಿಕೊಂಡು ಸಂತಾನೋತ್ಪತ್ತಿ ಮಾಡುತ್ತವೆ.
ದೇವಗೊಂಡನಹಳ್ಳಿ ಕೆರೆಯಲ್ಲಿ 20 ಕ್ಕಿಂತ ಹೆಚ್ಚು ನೀರುನಾಯಿಗಳಿವೆ.
ಮೀನು, ಕಪ್ಪೆ, ಏಡಿ, ಸೇರಿದಂತೆ ಇತರ ಜಲಚರಗಳನ್ನು ತಿನ್ನುತ್ತವೆ. ಇತ್ತೀಚಿಗೆ ದೇವಗೊಂಡನಹಳ್ಳಿ ಕೆರೆಯಲ್ಲಿ ಮೀನಿನ ಸಂಖ್ಯೆ ಹೆಚ್ಚಾದ ಕಾರಣ ಬೇರೆಡೆಗೆ ತೆರಳದೆ ಕೆರೆಯಲ್ಲಿಯೇ ಉಳಿದುಕೊಂಡಿವೆ. ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದರಿಂದ ವಲಸೆ ಹೋಗುವ ನಿರೀಕ್ಷೆ ಇದೆ.
ಕೆರೆಯಲ್ಲಿ ನೀರು ಹೆಚ್ಚಿದ್ದಾಗ ನೀರುನಾಯಿಗಳು ಕಾಣಿಸಿಕೊಳ್ಳುತ್ತವೆ. ನೀರು ಕಡಿಮೆಯಾದಾಗ ಹತ್ತಿರದ ಹೊಲಗಳಿಗೆ ನುಗ್ಗುತ್ತವೆ ಎಂದು ದೇವಗೊಂಡನಹಳ್ಳಿ ಗ್ರಾಮಸ್ಥರು ತಿಳಿಸಿದರು.