ಸಮಯಪ್ರಜ್ಞೆ, ಸಮನ್ವಯವೇ ಜೀವರಕ್ಷಕ

ಹೊಸಪೇಟೆ ಉಪವಿಭಾಗಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ನಡೆಯಿತು.
ಹೊಸಪೇಟೆ ಉಪವಿಭಾಗಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿಪತ್ತು ನಿರ್ವಹಣೆ ಅಣಕು ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಭಿಪ್ರಾಯ
ಹೊಸಪೇಟೆ: ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಾವು-ನೋವುಗಳ ಕನಿಷ್ಠ ಮಟ್ಟಕ್ಕೆ ಇಳಿಸಲು ಜಿಲ್ಲಾಡಳಿತದ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಮತ್ತು ಕ್ಷಿಪ್ರ ಸ್ಪಂದನೆ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ನಗರದ ಉಪವಿಭಾಗಿಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನದಲ್ಲಿ ಮಾತನಾಡಿದರು.

ಈ ಅಣಕು ಪ್ರದರ್ಶನದ ವೇಳೆ ಆಗುವ ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದಿಕೊಳ್ಳುವ ಮೂಲಕ, ನೈಜ ತುರ್ತು ಸಂದರ್ಭದಲ್ಲಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಬಹುದು. ಈ ಅಣಕು ಪ್ರದರ್ಶನವು ಕೇವಲ ಒಂದು ತಾಲೀಮಾಗಿರದೆ, ಜನರ ಜೀವ ರಕ್ಷಣೆಗಾಗಿ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಇಂತಹ ತಾಲೀಮುಗಳು ಕೇವಲ ಪ್ರದರ್ಶನಕ್ಕಲ್ಲ, ಬದಲಾಗಿ ನಮ್ಮ ಸಿದ್ಧತೆಯನ್ನು ಒರೆಗೆ ಹಚ್ಚುವ ಸಾಧನವಾಗಿದೆ‌. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ವಿದ್ಯುತ್ ಲೋಡ್ ಹೆಚ್ಚಳದಿಂದ ಸಂಭವಿಸಬಹುದಾದ ಶಾರ್ಟ್ ಸರ್ಕ್ಯೂಟ್ ಅವಘಡಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ಸಂದರ್ಭಗಳಲ್ಲಿ ಬೆಂಕಿ ನಂದಿಸುವ ತಾಂತ್ರಿಕತೆ ಮತ್ತು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಧಾನಗಳ ಬಗ್ಗೆ ಪ್ರತಿಯೊಬ್ಬರಿಗೂ ಕನಿಷ್ಠ ಜ್ಞಾನವಿರಬೇಕು. ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕತೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನಗರದ ಆಸ್ಪತ್ರೆಯಲ್ಲಿ ಅನಿರೀಕ್ಷಿತವಾಗಿ ಮೊಳಗಿದ ಸೈರನ್ ಸದ್ದು, ಕ್ಷಣಾರ್ಧದಲ್ಲಿ ಧಾವಿಸಿ ಬಂದ ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳ ದೌಡು ಮತ್ತು ಬಿಗಿ ಪೊಲೀಸ್ ಬಂದೋಬಸ್ತ್! ಇದನ್ನು ಕಂಡ ಆಸ್ಪತ್ರೆಯಲ್ಲಿದ ಸಾರ್ವಜನಿಕರು ಒಂದು ಕ್ಷಣ ಸ್ತಬ್ಧರಾದರು. ಆದರೆ, ಇದು ಯಾವುದೇ ನೈಜ ಅವಘಡವಲ್ಲ, ಬದಲಾಗಿ ವಿಪತ್ತು ಎದುರಿಸಲು ಜಿಲ್ಲಾಡಳಿತ ನಡೆಸಿದ ಅಣಕು ಪ್ರದರ್ಶನ
ಆಸ್ಪತ್ರೆಯ ಒಂದು ಕಟ್ಟಡದಲ್ಲಿ ಬಾಂಬ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂಬ ಸನ್ನಿವೇಶ ನೋಡುಗರ ಕಣ್ಣಿಗೆ ಕಟ್ಟುವಂತೆ ಸೃಷ್ಟಿಸಲಾಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹೊಗೆಯ ನಡುವೆ ನುಗ್ಗಿ, ಸ್ಪೋಟದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಾಹಸಮಯ ದೃಶ್ಯಗಳು ನೋಡುಗರ ಕಣ್ಣಿಗೆ ಕಟ್ಟುವಂತಿತ್ತು. ದಟ್ಟ ಹೊಗೆಯ ನಡುವೆ 'ಕೋಡ್ ರೆಡ್' ಘೋಷಣೆಯಾಗುತ್ತಿದ್ದಂತೆ, ರಕ್ಷಣಾ ಕಾರ್ಯ ಚುರುಕುಗೊಂಡಿತು.
ಅಗ್ನಿ ಶಾಮಕದಳ ಜಿಲ್ಲಾ ಅಧಿಕಾರಿ ವಾಲಿ ಪ್ರಮೋದ್, ಡಿ.ಎಚ್.ಒ ಶಂಕರ್ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net