ಕೊಟ್ಟೂರು: ಹ್ಯಾಳ್ಯಾ ಗ್ರಾಪಂ ಬಸ್ ನಿಲ್ದಾಣದಲ್ಲಿನ ಪುಸ್ತಕ ಗೂಡಿಗೆ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಬುಧವಾರ ಭೇಟಿ ನೀಡಿದರು.
‘ಹ್ಯಾಳ್ಯಾದಲ್ಲಿ ಓದುಗರ ಗಮನ ಸೆಳೆಯುತ್ತಿರುವ ಪುಸ್ತಕ ಗೂಡು’ ಶೀರ್ಷಿಕೆಯಡಿ ಮಂಗಳವಾರ ‘ವಿಜಯವಾಣಿ’ಯಲ್ಲಿ ಪ್ರಕಟವಾದ ವರದಿ ಗಮನಿಸಿ ಭೇಟಿ ನೀಡಿ ಪುಸ್ತಕ ಗೂಡು ಹಾಗೂ ಮಾಹಿತಿ ಕೇಂದ್ರದಲ್ಲಿ ಹೆಚ್ಚುವರಿ ಸೌಲಭ್ಯ ಕಲ್ಪಿಸುವಂತೆ ಪಿಡಿಒಗೆ ಸೂಚಿಸಿದರು.
ಈ ಪುಸ್ತಕ ಗೂಡನ್ನು 2024 ರಲ್ಲಿ ಆರಂಭಿಸಲಾಗಿದ್ದು ಗ್ರಾಮಸ್ಥರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರ ಸಂರಕ್ಷಣೆಗೆ ತಾಪಂ ಅನುದಾನದಡಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತಾಪಂ ಇಒ ಡಾ.ಬಾಳಪ್ಪನವರ ಆನಂದಕುಮಾರ ತಿಳಿಸಿದರು.
ಜಿಪಂ ಅಧಿಕಾರಿ ಲೋಕೇಶ್ ಬಾಬು, ಎಡಿಪಿಸಿ ಬಸವರಾಜ್, ಪಿಡಿಒ ಸಿ.ಎಚ್.ಎಂ.ಗಂಗಾಧರ, ಗ್ರಂಥಪಾಲಕರಾದ ಬಿ.ಲೋಕೇಶ್, ಗ್ರಾಪಂ ಸಿಬ್ಬಂದಿ ಇದ್ದರು.