ಹೊಸಪೇಟೆ: ಬಳ್ಳಾರಿ ತಾಲೂಕಿನ ಕುಡುತಿನಿ ಪ್ರದೇಶದಲ್ಲಿನ ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ಒಸಗಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಪಕ್ಷದಿಂದ ನಗರದ ತಹಸೀಲ್ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಅಂದಿನ ಬಿಜೆಪಿ ಸರ್ಕಾರವು 2010-12ರ ಅವಧಿಯಲ್ಲಿ ಆರ್ಸೆಲರ್ ಮಿತ್ತೆಲ್, ಭ್ರಾಹ್ಮಿಣಿ ಮತ್ತು ವಿಜಯನಗರ ಸ್ಟೀಲ್ ಕೈಗಾರಿಕೆಗಳಿಗಾಗಿ ಬಳ್ಳಾರಿ ತಾಲೂಕಿನ ಕುಡುತಿನಿ ಪ್ರದೇಶದಲ್ಲಿ 7 ಗ್ರಾಮಗಳ ಸುಮಾರು 5,000 ರೈತ ಕುಟುಂಬಗಳ 12,887 ಎಕರೆ ಜಮೀನನ್ನು ಬಲವಂತವಾಗಿ, ಮೋಸದ ಬೆಲೆಗೆ ಸ್ವಾಧೀನಪಡಿಸಿಕೊಂಡಿರುವುದನ್ನು ಖಂಡಿಸಿದೆ.
ಭೂಮಿ ಕಳೆದುಕೊಂಡು 16 ವರ್ಷಗಳಾದರೂ ಯಾವುದೇ ಕೈಗಾರಿಕೆ ಸ್ಥಾಪನೆಯಾಗದೆ, ಉದ್ಯೋಗವೂ ಸಿಗದೆ ರೈತರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇತ್ತೀಚೆಗೆ ಜಿಲ್ಲಾ ನ್ಯಾಯಾಲಯವು ಪ್ರತಿ ಎಕರೆಗೆ ಶಾಸನಬದ್ಧ ಸೌಲಭ್ಯ ಹಾಗೂ ಬಡ್ಡಿ ಸೇರಿ 1.3 ಕೋಟಿ ರೂ.ಗೂ ಅಧಿಕ ಬೆಲೆ ನಿಗದಿಪಡಿಸಿದೆ. ಇತ್ತ ಕೆಐಎಡಿಬಿ ರೈತರಿಂದ ಕೇವಲ 5 ರಿಂದ 8 ಲಕ್ಷಕ್ಕೆ ಪಡೆದ ಭೂಮಿಯನ್ನು 1.5 ಕೋಟಿಗೆ ಮಾರಾಟಕ್ಕಿಟ್ಟಿದೆ. ಇದರಿಂದ ರೈತರಿಗೆ ಪ್ರತಿ ಎಕರೆಗೆ 1.25 ಕೋಟಿ ರೂ. ಹಾಗೂ ಒಟ್ಟಾರೆ 20 ಸಾವಿರ ಕೋಟಿ ರೂ.ಗಳ ಬೃಹತ್ ನಷ್ಟ ಮತ್ತು ವಂಚನೆಯಾಗಿದೆ. ಕೈಗಾರಿಕೆ ಸ್ಥಾಪಿಸಲಾಗದೆ ಆರ್ಸೆಲರ್ ಮಿತ್ತೆಲ್ ಕಂಪನಿ ವಾಪಸ್ ನೀಡಿದ ಭೂಮಿಯನ್ನು ಕೆಐಎಡಿಬಿಯು ರೈತರಿಗೆ ನೀಡದೆ, ಜಿಂದಾಲ್ ಕಂಪನಿಯೊAದಿಗೆ ಶಾಮೀಲಾಗಿ ಕೇವಲ 28 ಲಕ್ಷ ರೂ.ಗೆ ಮಾರಾಟ ಮಾಡುವ ಮೂಲಕ ಸರ್ಕಾರ ಹಾಗೂ ರೈತರಿಗೆ ದ್ರೋಹ ಬಗೆದಿದೆ. ಈ ಬೃಹತ್ ಹಗರಣದ ತನಿಖೆ ನಡೆಸಿ, ರೈತರಿಗೆ ನ್ಯಾಯ ಒದಗಿಸುವಂತೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದೆ..