ಹಗರಿಬೊಮ್ಮನಹಳ್ಳಿ: ಮೃಗಶಿರ ನಕ್ಷತ್ರ ಹಿನ್ನೆಲೆಯಲ್ಲಿ ನಂದಿಪುರ ಮಠದಲ್ಲಿ ದಮ್ಮು, ಕೆಮ್ಮು ಹಾಗೂ ಅಸ್ತಮಾ ರೋಗಿಗಳಿಗೆ ಆಯುರ್ವೇದ ಔಷಧ ಉಚಿತ ವಿತರಣೆ ಸೋಮವಾರ ಮಾಡಲಾಯಿತು.
ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಸೇವಾ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳ ನೂರಾರು ರೋಗಿಗಳು ಮತ್ತು ಭಕ್ತರು ಔಷಧ ಸ್ವೀಕರಿಸುತ್ತಾರೆ. ಮಠದ ಲಿಂಗೈಕ್ಯ ಗುರುಗಳಾದ ಚರಂತಪ್ಪ ಅವರು ಶ್ರೇಷ್ಠ ಆಯುರ್ವೇದ ಪಂಡಿತರಾಗಿದ್ದು, ಅವರ ಪರಂಪರೆಯಂತೆ ಶ್ರೀಮಠವು ಜನರ ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಮನುಷ್ಯನಿಗೆ ಆರೋಗ್ಯವೇ ಮುಖ್ಯ ಎಂದರು.
ಉತ್ತಂಗಿಯ ಸೋಮಶಂಕರ ಸ್ವಾಮೀಜಿ ಮಾತನಾಡಿ, ಮೃಗಶಿರ ನಕ್ಷತ್ರದ ಸಂದರ್ಭದಲ್ಲಿ ಆಯುರ್ವೇದ ಔಷಧ ವಿತರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಭಕ್ತರು ಆರೋಗ್ಯದೊಂದಿಗೆ ಆಧ್ಯಾತ್ಮಿಕ ನೆಮ್ಮದಿಯನ್ನೂ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಆಯುರ್ವೇದ ವೈದ್ಯ ಕಲ್ಲೇಶಕುಮಾರ ಮಾತನಾಡಿ, ದಮ್ಮು, ಕೆಮ್ಮು ಹಾಗೂ ಅಸ್ತಮಾ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಔಷಧ ಸಹಕಾರಿಯಾಗಲಿದೆ ಎಂದರು. ಗದ್ದಿಕೇರಿಯ ಅಭಿನವ ಚರಂತೇಶ್ವರ ಸ್ವಾಮೀಜಿ, ಆಯುರ್ವೇದ ವೈದ್ಯ ಬಸವರಾಜ ಹಿರೇಮಠ, ಪ್ರಮುಖರಾದ ಬನ್ನಿಗೋಳ ವೆಂಕಣ್ಣ, ಎಚ್.ಎಂ.ಗುರುಬಸವರಾಜ ಇತರರಿದ್ದರು.