2026 ಸಂಭ್ರಮಾಚರಣೆಗೆ ಸಿದ್ಧತೆ ಜೋರು

new year
new year
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಡೆ ಹೊಸ ವರ್ಷದ ಕಾರ್ಯಕ್ರಮಗಳ ಆಯೋಜನೆ
  • ಬೇಕರಿಗಳಲ್ಲಿ ಕೇಕ್ ತಯಾರಿ ಜೋರು
ಹೊಸಪೇಟೆ: ಇದು 2025ನೇ ವರ್ಷದ ಕೊನೆಯ ಚರಣ. ಈ ವರ್ಷದ ಗಂಟು ಸಡಿಲಾಗುತ್ತಿದ್ದು, 2026ನೇ ಸಂವತ್ಸರದ ಜತೆಗೆ ಹೊಸ ನಂಟು ಬೆಸೆದುಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜ.1ರಿಂದ ಹೊಸ ವರ್ಷ ಆರಂಭವಾಗಲಿದ್ದು, ಡಿ.31ರರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗಲಿದೆ.
ವಿಜಯನಗರ ನಗರ ಮತ್ತು ಜಿಲ್ಲಾದ್ಯಂತ ಹಲವೆಡೆ ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ನಡೆದಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ನ್ಯೂ ಈಯರ್ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಕೆಲವು ಆಯೋಜಕರು ಕೆಲ ಹಿನ್ನೆಲೆ ಗಾಯಕರನ್ನು ಕಾರ್ಯಕ್ರಮಕ್ಕೆ ಕರೆಸಿ, ಸಾರ್ವಜನಿಕರಿಗೆ ಹೊಸ ವರ್ಷದ ಭರಪೂರ ಮನೋರಂಜನೆ ನೀಡಲು ಸಿದ್ಧತೆ. ನಡೆಸಿದ್ದಾರೆ.
ಹೇಳಿಕೇಳಿ ವಿಜಯನಗರದಲ್ಲಿ ವಿಶ್ವವಿಖ್ಯಾತ ಹಂಪಿ ಇದೆ. ದೇಶ ವಿದೇಶಿಗರು ಸೇರಿದಂತರ ಕಾಲೇಜು, ವಿವಿಗಳು ಸೇರಿ ಎಲ್ಲ ಕಾಲೇಜುಗಳು ಇಲ್ಲಿವೆ. ಜತೆಗೆ ಹಂಪಿ ಜೂ, ದರೋಜಿ ಕರಡಿ ಧಾಮ, ತುಂಗಭದ್ರಾ ಜಲಾಶಯ ಸೇರಿ ಇತರೆ ಮೆಚ್ಚಿನ ಪ್ರವಾಸಿ ತಾಣಗಳಿವೆ. ಹೀಗಾಗಿ ಇಲ್ಲಿ ಯುವಜನರ ಹವಾ ಹೆಚ್ಚು. ಹೀಗಾಗಿ ಜಿಲ್ಲೆಯ ಯುವಜನರನ್ನು ಗಮನದಲ್ಲಿರಿಸಿಕೊಂಡು ಪಾರ್ಟಿ, ಸಂಭ್ರಮಾಚರಣೆಗಳನ್ನು ಆಯೋಜಿಸಲಾಗುತ್ತಿದೆ.
ವಿಜಯನಗರ ನಗರ, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ದೊಡ್ಡ ಪಟ್ಟಣಗಳ ಬೇಕರಿಗಳು ಬಿಸಿ ಬಿಸಿ ಕೇಕ್ ತಯಾರಿಸುವುದರಲ್ಲಿ ಬ್ಯುಸಿಯಾಗಿವೆ. ಸಾವಿರಾರು ಗ್ರಾಹಕರು ಹೊಸ ವರ್ಷಕ್ಕಾಗಿ ಮುಂಗಡ ಕೇಕ್ ಬುಕಿಂಗ್ ಮಾಡುತ್ತಿದ್ದು, ಸೋಮವಾರದಿಂದಲೇ ಕೇಕ್ ಬೇಕಿಂಗ್ ಶುರುವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯAತೆ ಡಿ.31ರಂದು ರಾತ್ರಿ 12 ಗಂಟೆಗೆ ಬಹುತೇಕ ಪಾರ್ಟಿಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷ ಸ್ವಾಗತಿಸುವುದು ರೂಢಿ. ಅದಕ್ಕಾಗಿ ಜಿಲ್ಲೆಯ ಎಲ್ಲ ಪಟ್ಟಣ, ನಗರಗಳ ಪ್ರಸಿದ್ಧ ಬೇಕರಿಗಳಲ್ಲಿ ತುರುಸಿನ ತಯಾರಿ ನಡೆಯುತ್ತಿದೆ.

ಹಲವರಿಗೆ ಕೆಲಸ, ದುಡಿಮೆ

ಹೊಸ ವರ್ಷ ಕೆಲವರಿಗೆ ಸಂಭ್ರಮವಾದರೆ, ಮತ್ತೆ ಹಲವರಿಗೆ ದುಡಿಮೆ, ಕೈತುಂಬಾ ಕಾಸು ಕೊಡುವ ಸಮಯ. ಈ ವೇಳೆ, ಈವೆಂಟ್ ಆಯೋಜಕರು, ಶಾಮಿಯಾನದವರು, ಸಪ್ಟೆಯರ್ಗಳು, ಕೇಟರಿಂಗ್ ಸೇವೆ ಕೊಡುವವರು, ಸ್ಟೇಜ್ ನಿರ್ಮಿಸುವವರು, ಸೌಂಡ್ ಸಿಸ್ಟಮ್‌ನವರು, ಟೆಕ್ನಿಷಿಯನ್‌ಗಳು, ಸೆಕ್ಯೂರಿಟಿ ಗಾರ್ಡ್ಗಳು, ಬೌನ್ಸರ್‌ಗಳು, ಸ್ವಚ್ಛತಾ ಕೆಲಸದವರು, ಮಕ್ಕಳ ಕೇರ್‌ಟೇಕರ್‌ಗಳು, ಡೆಲಿವರಿ ಪ್ರತಿನಿಧಿಗಳು, ಸ್ವಾಗತಕಾರರು, ನಿರೂಪಕರು, ಗಾಯಕ, ಗಾಯಕಿಯರು, ಸಂಗೀತಗಾರರು, ವಾದ್ಯ ನುಡಿಸುವವರು, ಡೊಳ್ಳು ಡೋಲು, ಜನಪದ ಕಲಾವಿದರು ಸೇರಿದಂತೆ ಹಲವರಿಗೆ ಕೆಲಸ ಸಿಗುತ್ತದೆ.

ಪೊಲೀಸರ ನಿಗಾ

ಹೊಸ ವರ್ಷ ಆಚರಣೆ ವೇಳೆ ಅತಿರೇಕದ ಸಂಭ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸರು ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. 2026 ರ ಹೊಸ ವರ್ಷದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸೂಕ್ತ ಭದ್ರತೆಗಾಗಿ ಒಂದೆಡೆ ಖಾಕಿ ಸಿದ್ಧತೆ ಕೈಗೊಳ್ಳುತ್ತಿದೆ. ಮತ್ತೊಂದೆಡೆ ಯುವ ಸಮೂಹ ಹೊಸ ವರ್ಷದ ಆಚರಣೆಗೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ಮಾಡಿರುವ ಪೊಲೀಸರು ಸಾರ್ವಜನಿಕರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪುಂಡಾಟಿಕೆ ತೋರಿದ್ದಲ್ಲಿ ತಕ್ಕ ಶಾಸ್ತಿ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ.
"

ಜಿಲ್ಲಾಧ್ಯಾಂತ ಹೊಸವರ್ಷದ ಸಂಭ್ರಮ ಆಚರಸಲು ಎಲ್ಲ ಸಿದ್ದತೆ ನಡೆಸಲಾಗಿದೆ. ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಕೂಡ ಎಚ್ಚರ ವಹಿಸಲಿ.

"

ಹೊಸ ವರ್ಷದ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಹಾಕಲಾಗಿದೆ. ಹಂಪಿ ಸೇರಿದಂತೆ ಇತರೆ ಕಡೆ ಪ್ರವಾಸಿಗರು ಬರುವುದರಿಂದ ಮುನ್ನೆಚ್ಚರಿಕೆಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ವಿಶೇಷ ನಿಗಾ ವಹಿಸಲಾವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net