ವಿಜಯನಗರ ಜಿಲ್ಲೆಯ ಪ್ರಮುಖ ಐತಿಹಾಸಿಕ ಪಟ್ಟಣವಾದ ಕಮಲಾಪುರದಲ್ಲಿ ಹರಿಯುವ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯು (ಎಲ್‌ಎಲ್‌ಸಿ) ಪ್ರಸ್ತುತ ತೀವ್ರ ಹಂತದ ಮಾಲಿನ್ಯಕ್ಕೆ ತುತ್ತಾಗಿದೆ. ಕಾಲುವೆಯ ಒಡಲನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ನೀರಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ಕಸ, ತ್ಯಾಜ್ಯ ವಸ್ತುಗಳು ಹಾಗೂ ಕೊಳೆತ ರಾಡಿಯೇ ತುಂಬಿಕೊAಡಿರುವುದು ಎದ್ದು ಕಾಣುತ್ತಿದೆ. ನೂರಾರು ಟನ್ ಕಸದ ರಾಶಿ ನೀರಿನ ಮೇಲ್ಮೈ ಮೇಲೆ ತೇಲುತ್ತಿದ್ದು, ನೀರಿನ ಸಹಜ ಹರಿವಿಗೆ ತೀವ್ರ ಅಡ್ಡಿ ಉಂಟುಮಾಡಿದೆ. ಕೇವಲ ಪ್ಲಾಸ್ಟಿಕ್ ಅಥವಾ ಒಣ ಕಸ ಮಾತ್ರವಲ್ಲದೆ, ಸತ್ತ ನಾಯಿಗಳು, ಹಂದಿಗಳು ಸೇರಿದಂತೆ ಇತರೆ ಪ್ರಾಣಿಗಳ ಕಳೇಬರಗಳು ಸಹ ಇದೇ ಕಾಲುವೆ ನೀರಿನಲ್ಲಿ ಬಿದ್ದು ಕೊಳೆಯುತ್ತಿವೆ. ಇದರಿಂದಾಗಿ ಇಡೀ ಪರಿಸರದಲ್ಲಿ ತಡೆಯಲಾಗದ ದುರ್ವಾಸನೆ ಹರಡಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.