ಸಿಎಂ ಡೇಟ್‌ಗಾಗಿ ಕಾಯ್ತಿದೆ ಜನರ ಜೀವ

ಹೊಸಪೇಟೆಯಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಜಿಲ್ಲಾ ಆಸ್ಪತ್ರೆ
ಹೊಸಪೇಟೆಯಲ್ಲಿ ಹೊಸದಾಗಿ ನಿರ್ಮಾಣ ಆಗಿರುವ ಜಿಲ್ಲಾ ಆಸ್ಪತ್ರೆ
Published on

ಪ್ರಮುಖ ಮುಖ್ಯಾಂಶಗಳು

  • 124 ಕೋಟಿ ರೂ. ವೆಚ್ಚದ ಜಿಲ್ಲಾಸ್ಪತ್ರೆ ಕಲ್ಲಿನಂತೆ ಸ್ಥಬ್ಧ
ಹೊಸಪೇಟೆ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ 124 ಕೋಟಿ ರೂ. ಸಾರ್ವಜನಿಕರ ತೆರಿಗೆ ಹಣದಲ್ಲಿ ತಲೆ ಎತ್ತಿರುವ ವಿಜಯನಗರ ನೂತನ ಜಿಲ್ಲಾಸ್ಪತ್ರೆಯ ಬೃಹತ್ ಕಟ್ಟಡ ಈಗ ಜನರ ಪಾಲಿಗೆ ಆಸೆಯ ಗೋಡೆಯಾಗಿ ಉಳಿದಿದೆ. ಸಕಲ ಸೌಲಭ್ಯಗಳಿದ್ದರೂ, ಬಾಗಿಲು ತೆರೆಯದ ಈ ಹೈಟೆಕ್ ಆಸ್ಪತ್ರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಕಳೆದ ಹಂಪಿ ಉತ್ಸವದ ವೇಳೆಯೇ ಮುಖ್ಯಮಂತ್ರಿಗಳಿAದ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಬೇಕಿದ್ದ ಆಸ್ಪತ್ರೆ, ಸಿಬ್ಬಂದಿ ಕೊರತೆಯ ನೆಪವೊಡ್ಡಿ ಮುಂದೂಡಲ್ಪಟ್ಟಿತು. ಬಳಿಕ ಅಗತ್ಯ ಮಾನವ ಸಂಪನ್ಮೂಲಕ್ಕೆ ಅನುಮೋದನೆ ಸಿಕ್ಕರೂ, ಜಿಲ್ಲಾ ಶಸ್ತ್ರಚಿಕಿತ್ಸಕರನ್ನು (ಡಿಎಸ್) ನಿಯೋಜಿಸಿದ ಹೊರತಾಗಿ ಸೇವೆ ಮಾತ್ರ ಇಂದಿಗೂ ಆರಂಭವಾಗಿಲ್ಲ. ಕೇವಲ ಮುಖ್ಯಮಂತ್ರಿಗಳ ಕೈಯಿಂದಲೇ ರಿಬ್ಬನ್ ಕತ್ತರಿಸಬೇಕೆಂಬ ಪ್ರತಿಷ್ಠೆಗೆ ಬಿದ್ದು ಉದ್ಘಾಟನೆ ಮುಂದೂಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 300 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಸುಸಜ್ಜಿತ ಸಂಕೀರ್ಣದಲ್ಲಿ ತುರ್ತು ಚಿಕಿತ್ಸಾ ಘಟಕ (ಒಪಿಡಿ), ಹೆರಿಗೆ ವಾರ್ಡ್, ಕ್ಯಾನ್ಸರ್ ವಿಭಾಗ, ಇಎನ್ ಟಿ, ಹೃದ್ರೋಗ ಚಿಕಿತ್ಸಾ ಘಟಕ ಹಾಗೂ ಅತ್ಯಾಧುನಿಕ ರಕ್ತನಿಧಿ ಸೇರಿದಂತೆ ಬರೋಬ್ಬರಿ 17 ವಿಭಾಗಗಳನ್ನು ಸಜ್ಜುಗೊಳಿಸಲಾಗಿದೆ. ವಿಶಾಲ ಪಾರ್ಕಿಂಗ್, ರೋಗಿಗಳ ಸಂಬAಧಿಕರಿಗೆ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆಯೂ ಇದೆ. ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಕೆಕೆಆರ್‌ಡಿಬಿ ಹಾಗೂ ವಿಶೇಷ ಅನುದಾನದಡಿ ರಸ್ತೆ ಮತ್ತು ಕಾಂಪೌAಡ್ ನಿರ್ಮಿಸಿಕೊಟ್ಟರೂ, ಮುಖ್ಯ ಕಟ್ಟಡಕ್ಕೆ ಮಾತ್ರ ಗ್ರಹಣ ಬಿಟ್ಟಿಲ್ಲ.

ರಾಜಕೀಯ ಹಪಾಹಪಿ ಬಿಟ್ಟು ಸೇವೆ ನೀಡಿ

ಜಿಲ್ಲೆಯಲ್ಲಿ ಸೂಕ್ತ ತುರ್ತು ಚಿಕಿತ್ಸೆ ಸಿಗದೆ, ಅಪಘಾತಕ್ಕೀಡಾದವರು ಹಾಗೂ ಗಂಭೀರ ಕಾಯಿಲೆಯಿಂದ ಬಳಲುವ ಬಡ ರೋಗಿಗಳು ಕೊಪ್ಪಳ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ ಅಥವಾ ಹಾವೇರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ಗಳಲ್ಲಿ ಧಾವಿಸಬೇಕಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ದಾರಿಯಲ್ಲೇ ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಕೆಆರ್‌ಡಿಬಿ ಕಾರ್ಯದರ್ಶಿಗಳು ಬಂದು ಪರಿಶೀಲಿಸಿ ಫೋಟೋ ತೆಗೆಸಿಕೊಂಡಿದ್ದೇ ಸಾಧನೆಯಾಗಿದೆ. ಜಿಲ್ಲೆಯ ಆರೂ ತಾಲೂಕುಗಳ ಶಾಸಕರು ಮತ್ತು ಸಂಸದರು ಸರ್ಕಾರದ ಮೇಲೆ ಗಟ್ಟಿ ಒತ್ತಡ ಹೇರದೆ ಜಾಣ ಮೌನ ವಹಿಸಿದ್ದಾರೆ. ಕಟ್ಟಡ ಪಾಳು ಬೀಳುವ ಮುನ್ನ, ರಾಜಕೀಯ ಪ್ರಚಾರದ ಹಪಾಹಪಿ ಬಿಟ್ಟು ಜನಸಾಮಾನ್ಯರ ಜೀವ ಉಳಿಸಲು ಆಸ್ಪತ್ರೆಯನ್ನು ತಕ್ಷಣವೇ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕಿದೆ.

ಮತ್ತೆ ಅಕ್ಟೋಬರ್‌ವರೆಗೆ ಮುಂದೂಡಿಕೆ

ಹAಪಿ ಉತ್ಸವದ ವೇಳೆಯೇ ಆರಂಭವಾಗಬೇಕಿದ್ದ ಆಸ್ಪತ್ರೆ ಸೇವೆ ಇದೀಗ ಅಕ್ಟೋಬರ್ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತ ಮಂಡಳಿಯ ಈ ಸತತ 'ಡೇಟ್' ಬದಲಾವಣೆ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ಸದ್ಯ ಮಳೆಗಾಲದ ಸಂದರ್ಭದಲ್ಲಿ ಡೆಂಗ್ಯೂ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಇಂತಹ ತುರ್ತು ಸಂದರ್ಭದಲ್ಲೇ ಆಸ್ಪತ್ರೆಯನ್ನು ಅಕ್ಟೋಬರ್‌ವರೆಗೆ ಮುಂದೂಡಿರುವುದು ಜಿಲ್ಲೆಯ ಜನರ ಆರೋಗ್ಯದ ಜೊತೆಗಿನ ಚೆಲ್ಲಾಟ. ಅಕ್ಟೋಬರ್ ವರೆಗೆ ಬಡ ರೋಗಿಗಳು, ಗರ್ಭಿಣಿಯರು ಹಾಗೂ ತುರ್ತು ನಿಗಾ ಅಗತ್ಯವಿರುವವರು ಪರ ಜಿಲ್ಲೆಗಳಿಗೆ ಅಲೆಯುವುದನ್ನು ಮುಂದುವರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಲ್ಲಾ ಸೌಲಭ್ಯಗಳು ಸಿದ್ಧವಿದ್ದರೂ, ಕೇವಲ ದಿನಾಂಕಗಳನ್ನು ಮುಂದೂಡುತ್ತಾ ಕುಳಿತರೆ ಬಡವರ ಆರೋಗ್ಯದ ಜವಾಬ್ದಾರಿ ಹೊರಬೇಕಾದವರು ಯಾರು? ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
"

ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಶೇ.40 ರಿಂದ 50ರಷ್ಟು ವೈದ್ಯಕೀಯ ಉಪಕರಣಗಳು ಈಗಾಗಲೇ ಬಂದಿದ್ದು, ಸೆಪ್ಟೆಂಬರ್‌ನಲ್ಲಿ ಉಳಿದ ಉಪಕರಣಗಳು ಹಾಗೂ ಫರ್ನಿಚರ್ ಪೂರೈಕೆಯಾಗಲಿವೆ. ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿಗಳಿAದ ಆಸ್ಪತ್ರೆ ಉದ್ಘಾಟಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net