ಹೊಸಪೇಟೆ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ ವರ್ಗಾವಣೆಗೊಂಡ ಡಿವೈಎಸ್ಪಿ ಡಾ.ಟಿ.ಮಂಜುನಾಥ ಹಾಗೂ ಅವರ ಪತ್ನಿ ದಾಕ್ಷಾಯಿಣಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ, ವರ್ಗಾವಣೆಗೊಂಡ ಡಿವೈಎಸ್ಪಿ ಡಾ.ಟಿ.ಮಂಜುನಾಥ, ನೂತನ ಡಿವೈಎಸ್ಪಿ ಪಿ.ಮುರಳಿಧರ್, ಹೂವಿನ ಹಡಗಲಿ ಡಿವೈಎಸ್ಪಿ ಸಂತೋಷ ಚೌಹ್ಹಾಣ್ ಇತರರಿದ್ದರು.
ಹೊಸಪೇಟೆ: ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ವ್ಯವಸ್ಥೆಯಿದ್ದು, ಇಲಾಖೆಯಲ್ಲಿ ಸೌಜನ್ಯವಿದೆ. ಈ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದೇ ನಮ್ಮ ಪುಣ್ಯ ಎಂದು ಎಸ್ಪಿ ಎಸ್.ಜಾಹ್ನವಿ ಹೇಳಿದರು.
ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ ವರ್ಗಾವಣೆಗೊಂಡ ಡಿವೈಎಸ್ಪಿ ಡಾ.ಟಿ.ಮಂಜುನಾಥ ಅವರ ಬೀಳ್ಕೊಡುಗೆ ಹಾಗೂ ನೂತನ ಡಿವೈಎಸ್ಪಿ ಪಿ.ಮುರಳಿಧರ್ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಡಿವೈಎಸ್ಪಿ ಆಗಿದ್ದ ಮಂಜುನಾಥ ಅವರ ಸೇವೆ ಉತ್ತಮವಾಗಿತ್ತು. ಅವರ ವಿಭಾಗದಲ್ಲಿ ಎಷ್ಟೋ ಸಮಸ್ಯೆಗಳನ್ನು ಅವರು ನಿಭಾಯಿಸಿದರು. ಇಲಾಖೆಗಳ ಜತೆ ಸಮನ್ವಯತೆ ಸಾಧಿಸಲು ಅವರು ಕೊಂಡಿಯಾಗಿದ್ದರು. ಉತ್ಸವ, ಕಾರ್ಯಕ್ರಮಗಳ ಹಾಗೂ ಇತರೆ ಕಠಿಣ ಪರಿಸ್ಥಿತಿಯಲ್ಲಿ ಕೂಡ ಮಾಧರಿಯಾಗಿ ತಂಡವನ್ನು ನಡೆಸಿದ್ದಾರೆ. ದಕ್ಷತೆ, ಕಾರ್ಯಕ್ಷಮತೆ, ಜನಪರ ಸೇವೆ ಮೂಲಕ ಬಸವನಾಡಿನ ಜನರ ಪ್ರೀತಿ, ವಿಶ್ವಾಸ ಗಳಿಸಿರುವ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿ ಮತ್ತೆ ವಿಜಯನಗರ ಜಿಲ್ಲೆಗೆ ಅವರ ಸೇವೆ ಸಿಗುವಂತಾಗಲಿ ಎಂದರು.
ವರ್ಗಾವಣೆಗೊಂಡ ಡಿವೈಎಸ್ಪಿ ಡಾ.ಟಿ.ಮಂಜುನಾಥ ಮಾತನಾಡಿ, ನಮ್ಮ ಸೇವೆ ಸಾರ್ವಜನಿಕರಲ್ಲಿ ನೆನಪಾಗಿರಬೇಕು. ಸರ್ಕಾರಿ ಸೇವೆಯಲ್ಲಿ ಎಲ್ಲರಿಗೂ ನ್ಯಾಯ ಕೊಡಿಸಲು ಆಗದಿದ್ದರೂ, ನಮ್ಮ ನಿಷ್ಠೆ ನ್ಯಾಯಾದ ಪರವಾಗಿರಬೇಕು. ಆದರೆ, ಇಲ್ಲಿ ಸೇವೆ ಮಾಡಿದ ತೃಪ್ತಿ ಇದೆ ಎಂದರು.
ನೂತನ ಡಿವೈಎಸ್ಪಿ ಪಿ.ಮುರಳಿಧರ್ ಮಾತನಾಡಿ, ಸರ್ಕಾರದಲ್ಲಿ ವಾರ್ಗವಣೆ ಆಗುವುದು ನಿಯಮ. ಸ್ಥಾನ, ಸ್ಥಳ ಯಾವುದಾದರೇನು ಸೇವೆ ನಿಷ್ಠೆಯಿಂದ ಇರಬೇಕು. ಸೇವೆಯಲ್ಲಿ ಧಕ್ಷತೆ ಇದರೆ ಸಾರ್ವಜನಿಕರ ಪ್ರೀತಿಗಳಿಸುತ್ತೇವೆ. ನಮ್ಮ ವೃತ್ತಿಯಲ್ಲಿ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಯಶಸ್ವಿ ಆಡಳಿತ ನಡೆಸಬಹುದು ಎಂದರು.
ಎಎಸ್ಪಿ ಮಂಜುನಾಥ, ಹೂವಿನ ಹಡಗಲಿ ಡಿವೈಎಸ್ಪಿ ಸಂತೋಷ ಚೌಹ್ಹಾಣ್, ಆರ್ ಟಿಒ ಕೆ.ದಾಮೋದರ, ಪಿಐಗಳಾದ ಹುಲಗಪ್ಪ, ಗುರುರಾಜ್ ಕಟ್ಟಿಮನಿ, ಫೈಜುಲ್ಲ, ಸೋಮ್ಲನಾಯ್ಕ ಇತರರಿದ್ದರು.