ಅನ್ಯ ಕ್ರಿಮಿನಾಶಕ ಕಡ್ಡಾಯ ಮಾರಾಟ ಸೂಚನೆ ಕೈಬಿಡಿ

ಡಿಎಪಿ ಮತ್ತು ಯೂರಿಯಾ ರಸಗೊಬ್ಬರದೊಂದಿಗೆ ಬೇರೆ ಕ್ರಿಮಿನಾಶಕ ಮಾರಾಟ ಮಾಡುವ ಸೂಚನೆ ಕೈಬಿಡಬೇಕೆಂದು ಆಗ್ರಹಿಸಿ ಕೂಡ್ಲಿಗಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಮಾರಾಟಗಾರರ ಸಂಘದಿಂದ ಮನವಿ ಸಲ್ಲಿಸಲಾಯಿತು
ಡಿಎಪಿ ಮತ್ತು ಯೂರಿಯಾ ರಸಗೊಬ್ಬರದೊಂದಿಗೆ ಬೇರೆ ಕ್ರಿಮಿನಾಶಕ ಮಾರಾಟ ಮಾಡುವ ಸೂಚನೆ ಕೈಬಿಡಬೇಕೆಂದು ಆಗ್ರಹಿಸಿ ಕೂಡ್ಲಿಗಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಮಾರಾಟಗಾರರ ಸಂಘದಿಂದ ಮನವಿ ಸಲ್ಲಿಸಲಾಯಿತು
Published on
ಕೂಡ್ಲಿಗಿ: ಡಿಎಪಿ ಮತ್ತು ಯೂರಿಯಾ ರಸಗೊಬ್ಬರದೊಂದಿಗೆ ಬೇರೆ ಕ್ರಿಮಿನಾಶಕ ಮಾಡುವಂತೆ ಕೇಂದ್ರ ಸರ್ಕಾರ ತಾಕೀತು ಮಾಡಬಾರದು ಎಂದು ಆಗ್ರಹಿಸಿ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಮಾರಾಟಗಾರರ ಸಂಘದ ವತಿಯಿಂದ ಕೇಂದ್ರ ಸರ್ಕಾರಕ್ಕೆ ಬರೆದ ಮನವಿಯನ್ನು ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಸೋಮವಾರ ಸಲ್ಲಿಸಲಾಯಿತು.
ಸಂಘದ ತಾಲೂಕು ಉಪಾಧ್ಯಕ್ಷ ಎಂ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಮುಂಗಾರು ಆರಂಭದಲ್ಲಿ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಖರೀದಿಸಲು ಬರುವ ರೈತರಿಗೆ ಇತರ ಕ್ರಿಮಿನಾಶಕವನ್ನೂ ಕಡ್ಡಾಯವಾಗಿ ಮಾರಾಟ ಮಾಡುವಂತೆ ಸೂಚಿಸಲಾಗುತ್ತಿದೆ. ಆದರೆ, ರೈತರು ಬೇರೆ ಕ್ರಿಮಿನಾಶಕ ಖರೀದಿಗೆ ಒಪ್ಪುತ್ತಿಲ್ಲ. ಇದರಿಂದಾಗಿ ರೈತರು ಖರೀದಿಸಲು ಒಪ್ಪದ ಕ್ರಿಮಿನಾಶಕಗಳನ್ನು ಗೋದಾಮಿನಲ್ಲಿ ಅನಗತ್ಯವಾಗಿ ಇಡಬೇಕಾಗಿದೆ. ಇದರಿಂದಾಗಿ ರಸಗೊಬ್ಬರ ಡೀಲರ್‌ಗಳಿಗೆ ಆರ್ಥಿಕ ಹೊರೆಯಾಗುತ್ತಿದೆ. ರಸಗೊಬ್ಬರಗಳ ಎಂಆರ್‌ಪಿ ಮೇಲೆ ಶೇ.8 ಲಾಭಾಂಶ ಇರುವಂತೆ ಸರ್ಕಾರ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ಡೀಲರ್‌ಗಳಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದರು.
ಎಫ್‌ಐಡಿ ಇದ್ದರೆ ಮಾತ್ರ ರೈತರಿಗೆ ರಸಗೊಬ್ಬರ ನೀಡುವಂತೆ ಸರ್ಕಾರ ಷರತ್ತು ರೂಪಿಸಿದೆ. ಅನೇಕ ರೈತರ ಪಹಣಿ ಅವರ ಪೂರ್ವಿಕರ ಹೆಸರಲ್ಲಿದ್ದು, ಎಫ್‌ಐಡಿ ಮಾಡಿಸಿಲ್ಲ. ಇದರಿಂದಾಗಿ ಗೊಂದಲ ಸೃಷ್ಟಿ ಆಗುತ್ತಿದೆ. ಆದ್ದರಿಂದ ಎಫ್‌ಐಡಿ ಮಾನದಂಡ ಕೈ ಬಿಡಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕಗಳ ಸ್ಯಾಂಪಲ್ ಕಳಪೆಯಿದ್ದಾಗ ಡೀಲರ್‌ಗಳ ವಿರುದ್ಧ ಮೊಕದ್ದಮೆ ಹಾಕಲಾಗುತ್ತಿದ್ದು, ಇದನ್ನು ತಪ್ಪಿಸಬೇಕು ಕಂಪನಿ ವಿರುದ್ಧ ಮೇಲೆ ಕೇಸ್ ಹಾಕಿ ಡೀಲರ್‌ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು. ಅಧಿಕಾರಿಗಳು ಅಂಗಡಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ದಾಳಿ ಎನ್ನುವ ಪದ ಬಳಸದೆ ತಪಾಸಣೆ ಎನ್ನಬೇಕು. ಅಂಗಡಿಗಳ ಫೋಟೋ ಬಳಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಖಜಾಂಚಿ ಬಂಡ್ರಿ ಕೃಷ್ಣಮೂರ್ತಿ, ಸತೀಶ್, ಬಿ.ಬದರಿನಾರಾಯಣ, ಹಿರೇಹೆಗ್ಡಾಳ್ ಶಿವಯೋಗಿ, ಚಂದ್ರಮೌಳಿ, ನಿಜಾಮ್, ರಾಮಣ್ಣ ಪೂಜಾರಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net