ಕನ್ನಡ ವಿವಿ ಆವರಣದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವಿರೋಧ

ಕನ್ನಡ ವಿವಿ ಆವರಣದಲ್ಲಿ ಶನಿವಾರ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠಗೆ ಕುಲಸಚಿವ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಅವರು ಮನವಿ ಸಲ್ಲಿಸಿದರು. ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಪಿಡಬ್ಲ್ಯೂಡಿ ಎಇ ರವಿನಾಯ್ಕ, ಇತರರಿದ್ದರು.
ಕನ್ನಡ ವಿವಿ ಆವರಣದಲ್ಲಿ ಶನಿವಾರ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠಗೆ ಕುಲಸಚಿವ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಅವರು ಮನವಿ ಸಲ್ಲಿಸಿದರು. ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ, ಪಿಡಬ್ಲ್ಯೂಡಿ ಎಇ ರವಿನಾಯ್ಕ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಮೀನು ನೀಡಲು ವಿವಿಯಾಡಳಿತ ನಿರಾಕರಣೆ
ಹೊಸಪೇಟೆ: ಕನ್ನಡ ವಿವಿ ಆವರಣದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ವಿರೋಧಿಸಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರಿಗೆ ಕುಲಸಚಿವ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಅವರು ಮನವಿ ಸಲ್ಲಿಸಿದರು.
ವಿವಿ ಆವರಣದಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿಪಡಿಸುವ ಯೋಜನೆಯನ್ನು ಸ್ಥಳ ವೀಕ್ಷಣೆಗೆ ಆಗಮಿಸಿದ ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಹಾಗೂ ತಹಸೀಲ್ದಾರ್ ಶೃತಿ ಎಂ.ಮಳ್ಳಪ್ಪಗೌಡ್ರ್ ಅವರೊಂದಿಗೆ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರಿಗೆ ವಿವಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಅಡ್ಡಿಪಡಿಸಿದರು. ಕನ್ನಡ ವಿವಿಯ ಜಮೀನಿನಲ್ಲಿ ಹೆಲಿಪೋರ್ಟ್‌ ಅಭಿವೃದ್ಧಿಪಡಿಸುವ ಯೋಜನೆಯನ್ನು ವಿವಿಯ ಆಡಳಿತ ಮಂಡಳಿಯು ಸ್ಪಷ್ಟವಾಗಿ ವಿರೋಧಿಸಿದೆ. ವಿಐಪಿ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಹಾಗೂ ಟೇಕ್‌ಆಫ್‌ಗಾಗಿ ಜಮೀನು ಹಸ್ತಾಂತರಿಸುವಂತೆ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದಿದ್ದ ಮನವಿಗೆ, ವಿವಿಯು ಜಮೀನು ನೀಡಲು ಸಾಧ್ಯವಿಲ್ಲವೆಂದು ಪತ್ರ ಬರೆದಿದೆ ಎಂದು ತಿಳಿಸಿದರು.
ವಿವಿಯ ವ್ಯಾಪ್ತಿಗೆ ಒಳಪಡುವ ಸರ್ವೆ ಸಂಖ್ಯೆ 602ರಲ್ಲಿ 3.36 ಎಕರೆ, 608 ರಲ್ಲಿ 2.50 ಎಕರೆ ಮತ್ತು 610 ರಲ್ಲಿ 3.56 ಎಕರೆ ಸೇರಿ ಒಟ್ಟು 9.42 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ, ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ವಿವಿ ಕುಲಸಚಿವರು, ಈ ಜಮೀನು ಹಸ್ತಾಂತರ ಶೈಕ್ಷಣಿಕ ವಾತಾವರಣಕ್ಕೆ ಮಾರಕವಾಗಲಿದೆ. ಕಳೆದ 34 ವರ್ಷಗಳಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಶ್ರಮಿಸಿ ಬೆಳೆಸಿದ ದಟ್ಟ ಹಸಿರಿನ ಆವರಣ ಹಾಗೂ ಅಪರೂಪದ ಜೀವ ವೈವಿಧ್ಯತೆಗೆ ಹೆಲಿಪೋರ್ಟ್‌ನಿಂದ ಧಕ್ಕೆಯಾಗಲಿದೆ. ನಿರಂತರ ಶಬ್ದ ಮಾಲಿನ್ಯದಿಂದಾಗಿ ಅಧ್ಯಯನ, ಸಂಶೋಧನೆ ಮತ್ತು ಪಾಠ-ಪ್ರವಚನಗಳಿಗೆ ಅಡ್ಡಿಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಹಿಂದೆಯೂ (2010ರಲ್ಲಿ) ಕೂಡ ಥೀಮ್ ಪಾರ್ಕ್‌ಗಾಗಿ ಜಮೀನು ಕೇಳಿದ್ದಾಗ ಕನ್ನಡಿಗರ ಹೋರಾಟದಿಂದ ಜಮೀನನ್ನು ಉಳಿಸಿಕೊಳ್ಳಲಾಗಿತ್ತು. ಹೀಗಾಗಿ, ವಿಶ್ವವಿದ್ಯಾಲಯದ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಲಿಪೋರ್ಟ್‌ಗೆ ಜಮೀನು ನೀಡಲು ಸಾಧ್ಯವಿಲ್ಲ ಎಂಬ ನಿಲುವಿಗೆ ವಿವಿ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ವಿವಿ ಇಂಜಿನಿಯರ್‌ ಚಂದ್ರಶೇಖರ್, ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ್ ಬಣ್ಣದಮನೆ, ವಿದ್ಯಾರ್ಥಿಗಳಾದ ಅನಿಲ್ ಕುಮಾರ್ ನಾಯಕರ, ಡಿ.ಬಿ.ಕುಮಾರ್, ಗೋಣಿಬಸಪ್ಪ, ಪ್ರವೀಣ್, ಆನಂದ, ನರಸಿಂಹರಾಜು, ವಿಷ್ಣು, ಜಿ.ಟಿ.ಮಂಜಣ್ಣ, ಸತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net