ಎಂಎಲ್ಸಿ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆ ಬಿ,ಶ್ರೀರಾಮುಲು ಹೇಳಿಕೆ
ಹೊಸಪೇಟೆ: ಇತ್ತೀಚೆಗೆ ನಡೆಸ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿರುವ ಕುರಿತಂತೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವುದು ಬೇಡ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನ ಕುರಿತು ಆಣೆ ಪ್ರಮಾಣ ಮಾಡುವ ಬಗ್ಗೆ ನಮ್ಮ ನಾಯಕರಾದ ಪ್ರಹ್ಲಾದ್ ಜೋಷಿ ಹಾಗೂ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ನಾನೂ ಸಹ ಅವರ ಹೇಳಿಕೆಗೆ ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಬೇಡ. ಧರ್ಮಸ್ಥಳಕ್ಕೆ ತನ್ನದೇ ಆದ ಪಾವಿತ್ರ‍್ಯತೆ ಇದೆ. ಯಾರು ಅಡ್ಡಮತದಾನ ಮಾಡಿದ್ದಾರೆ ಎನ್ನುವುದು ನನಗೂ ಗೊತ್ತಿದೆ. ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಜರುಗಿದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ನಡುವಿನ ಜಗಳ ಬಹಿರಂಗವಾಗಿದೆ. ಗಾಂಧಿ ಕುಟುಂಬದ ಐದು ತಲೆಮಾರಿನ ಜತೆ ಕೆಲಸ ಮಾಡಿದ್ದೇನೆ ಎಂದು ಬಿ.ಕೆ. ಹರಿಪ್ರಸಾದ ಹೇಳುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಗೆ ವಾರ್ನಿಂಗ್ ಮಾಡಿದಂತಿದೆ. ಈ ಮೂಲಕ ಡಿ.ಕೆ. ಶಿವಕುಮಾರ್ ರನ್ನು ಹೆದರಿಸುವ ಕೆಲಸ ಮಾಡಿದ್ದಾರೆ ಎಂದು ಶ್ರೀರಾಮುಲು ವ್ಯಂಗವಾಡಿದರು.
ಆರ್.ಎಸ್.ಎಸ್ ಬಗ್ಗೆ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಮೊದಲು ಗ್ರಾಮ ಪಂಚಾಯತಿ ಚುನಾವಣೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ಅವರು, ಯಾವುದೇ ಚುನಾವಣೆ ಗೆಲ್ಲದೇ ಹಿಂಬಾಗಿಲಿನಿAದ ಹರಿಪ್ರಸಾದ ರಾಜಕೀಯ ಮಾಡುತ್ತಿದ್ದಾರೆ ಎಂದರು.