ಹೊಸಪೇಟೆ: ತಾಯ್ತನಕ್ಕೆ ಕಳಂಕ ತರುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಈಗಷ್ಟೇ ಜನ್ಮ ತಾಳಿದ್ದ ನವಜಾತ ಶಿಶುವಿನ ಮೃತದೇಹವೊಂದು ನಗರದ ಬಸವಣ್ಣ ಕಾಲುವೆಯಲ್ಲಿ ತೇಲಿಬಂದಿದ್ದು, ಸಾರ್ವಜನಿಕರ ಮನಕಲಕಿದೆ.
ಬುಧವಾರ ಬೆಳಿಗ್ಗೆ ಬಸವಣ್ಣ ಕಾಲುವೆಯಲ್ಲಿ ಮಗುವಿನ ದೇಹ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೆತ್ತು ಹೊತ್ತ ತಾಯಿಯೇ ಅಥವಾ ಯಾರೋ ಕಿಡಿಗೇಡಿಗಳು ಶಿಶುವನ್ನು ಕಾಲುವೆಗೆ ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಣ್ಣು ತೆರೆಯುವ ಮುನ್ನವೇ ಜೀವ ಕಳೆದುಕೊಂಡ ಕಂದಮ್ಮನ ಮೃತದೇಹವನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ಹಾಗೂ ಮಮ್ಮಲ ಮರುಕ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮಗುವನ್ನು ಎಸೆದವರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.