ಹೂವಿನಹಡಗಲಿ : ಆಗಿ ಹುಣ್ಣಿಮೆಯ ಅಂಗವಾಗಿ ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಗುರುವಾರ ಸಂಭ್ರಮ ಸಡಗರದಿಂದ ಜರಿಗಿತು.
ಉತ್ತರಕರ್ನಾಟಕದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರಸ್ವಾಮಿಯು ಗಂಗಿಮಾಳಮ್ಮ ದೇವಿಗೆ ಏ.28 ರ ಮಂಗಳವಾರದAದು ಮಾಂಗಲ್ಯಧಾರಣೆ ಮಾಡುವ ಮೂಲಕ ಶ್ರೀ ಸ್ವಾಮಿಯ ಕಲ್ಯಾಣೋತ್ಸವ ಆರಂಭವಾಯಿತು. ಅಂದಿನಿAದ ಹುಣ್ಣಿಮೆಯ ವರೆಗೂ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕಗಳು ಜರುಗಿದವು. ಹುಣ್ಣಿಮೆಯ 5 ದಿನದ ಪೂರ್ವದಲ್ಲಿ ನವಧಾನ್ಯಗಳನ್ನು ದೇವಸ್ಥಾನದ ಆವರಣದಲ್ಲಿ ಭಿತ್ತನೆ ಮಾಡಲಾಗಿತ್ತು.
ಹುಣ್ಣಿಮೆ ದಿನದಂದು ಯಾವ ಧಾನ್ಯವು ಹೆಚ್ಚು ಪಸಲು ನೀಡಿರುತ್ತದೆ ಎಂಬುದನ್ನು ಗಮನಿಸಿದ ಭಕ್ತರು ತಮ್ಮ ಜಮೀನುಗಳಲ್ಲಿ ಈ ಬಾರಿ ಅದೇ ಧಾನ್ಯವನ್ನು ಭಿತ್ತನೆ ಮಾಡಿದರೆ ಫಲ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶ್ರೀ ಸ್ವಾಮಿಯ ಕಲ್ಯಾಣೋತ್ಸವದ ಅಂಗವಾಗಿ ನವದಂಪತಿಗಳ ಕಲ್ಯಾಣದ ಮೆರವಣಿಗೆಯು ಗುರುವಾರ ರಾತ್ರಿ ರಥೋತ್ಸವದೊಂದಿಗೆ ಜರುಗಿತು. ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತ ಸಮೂಹ ಶ್ರೀ ಸ್ವಾಮಿಗೆ ತಮ್ಮ ಹರಕೆಯನ್ನು ತೀರಿಸಿದರು. ಶುಕ್ರವಾರ ತುಂಗಭದ್ರಾ ನದಿಗೆ ತೆರಳುವ ಮೂಲಕ ಕಂಕಣ ವಿಸರ್ಜನೆ ನಡೆಯುವುದು ಸಂಜೆ ದೇವಸ್ಥಾನದ ಆವರಣದಲ್ಲಿ ಸರಪಳಿಪವಾಡ ಸೇರಿದಂತೆ ಇತರ ಪವಾಡಗಳು ಜರುಗಲಿವೆ.
ಕಾರ್ಣಿಕೋತ್ಸವದ ಭವಿಷ್ಯದಂತೆ ಭಿತ್ತನೆ :
ದೇವಸ್ಥಾನದ ಆವರಣದಲ್ಲಿ ಭಿತ್ತನೆ ಮಾಡಿದ ಧಾನ್ಯಗಳಲ್ಲಿ ಭತ್ತ, ಹೆಸರು, ಮಡಿಕೆ ಉತ್ತಮವಾಗಿ ಬೆಳೆದರೆ ಜೋಳ, ರಾಗಿ, ಹುರುಳಿ, ಎಳ್ಳು, ಕಡಲೆ, ಅಲಸಂದಿ ಇವು ಮಧ್ಯಮ ಪ್ರಮಾಣದಲ್ಲಿ ಬೆಳೆದಿವೆ. ಈ ಬೆಳೆಗಳನ್ನು ಗಮನಿಸಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆಯುತ್ತಾರೆ ಎಂಬ ಐತಿಹ್ಯವಿದೆ.