ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ರಾಜಕೀಯ ಹೈಡ್ರಾಮಾ ಕೈಮ್ಯಾಕ್ಸ್ ಹಂತ ತಲುಪಿದ್ದು, ಮಂತ್ರಿಗಿರಿ ಭಾಗ್ಯ ಯಾರಿಗೆ ಸಿಗಲಿದೆ ಎಂಬ ಜಿದ್ದಾಜಿದ್ದಿ ತೀವ್ರಗೊಂಡಿದೆ.
ಶೀಘ್ರವೇ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂಬ ಸುದ್ದಿ ಬೆನ್ನಲ್ಲೇ ಕೈ ಶಾಸಕರು ದೊಡ್ಡ ಆಸೆಗಳ ಮೂಟೆಯೊಂದಿಗೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯನ್ನು ಸತತ ಕಾಡುತ್ತಿರುವ ಸಚಿವ ಸ್ಥಾನದ ಬರಕ್ಕೆ ಈ ಬಾರಿಯೂ ಮುಕ್ತಿ ಸಿಗುವುದು ತೀರಾ ಅನುಮಾನವಿದೆ. ವಿಜಯನಗರ ಶಾಸಕ ಎಚ್. ಆರ್.ಗವಿಯಪ್ಪ ಸಚಿವ ಸ್ಥಾನದ ದೊಡ್ಡ ನಿರೀಕ್ಷೆಯಲ್ಲಿದ್ದರೆ, ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ್ ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ತಟಸ್ಥ ನಿಲುವು ತಳೆದಿದ್ದಾರೆ. ಸ್ವಂತ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬಹುದು ಎಂಬ ಆಸೆಯಿಂದ ಜಿಲ್ಲೆಯ ಶಾಸಕರು ಕಸರತ್ತು ನಡೆಸುತ್ತಿದ್ದರೂ ಹೈಕಮಾಂಡ್ ಲೆಕ್ಕಾಚಾರ ಬೇರೆಯೇ ಇರುವುದರಿಂದ ಇವರ ಪ್ರಯತ್ನಗಳು ಫಲಿಸುವುದು ಅನುಮಾನ.
ಹಿಂದೊಮ್ಮೆ ಅಖಂಡ ಬಳ್ಳಾರಿ ಜಿಲ್ಲೆಯು ಮೂವರನ್ನು ಒಟ್ಟಿಗೆ ಸಚಿವರಾಗಿ ನೋಡುವ ಅಪರೂಪದ ರಾಜಕೀಯ ವೈಭವವನ್ನು ಕಣ್ಣಾರೆ ಕಂಡಿತ್ತು. ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವಿದ್ದಾಗ ಬಳ್ಳಾರಿ ಜಿಲ್ಲೆಯ ರೆಡ್ಡಿ ಬ್ರದರ್ಸ್ ಒಟ್ಟಿಗೆ ಮೂರು ಸಚಿವ ಸ್ಥಾನಗಳನ್ನು ಅಲಂಕರಿಸಿ ಅಬ್ಬರಿಸಿದ್ದರು. ಅನಂತರ ಆನಂದ ಸಿಂಗ್ ಸಚಿವರಾಗಿದ್ದರು ಹಾಗೂ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯ ಬಿಜೆಪಿ ಸರ್ಕಾರದಲ್ಲೂ ಸಚಿವರಾಗಿದ್ದರು. ಆದರೆ, 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳ ನಡುವೆ ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಒಲಿದು ಬಂದಿತ್ತಾದರೂ ಅದು ಹೆಚ್ಚು ಕಾಲ ಉಳಿಯಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಈ ಅವಳಿ ಜಿಲ್ಲೆಗಳಿಗೆ ಸಚಿವ ಸ್ಥಾನವೇ ಸಿಕ್ಕಿಲ್ಲ. ಇದರ ನಡುವೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ನೂತನ ವಿಜಯನಗರ ಜಿಲ್ಲೆಗೆ ಯಾವುದೇ ವಿಶೇಷ ಅನುದಾನವನ್ನು ಕೂಡ ನೀಡಿಲ್ಲ. ಹೀಗಾಗಿ ಈ ಬಾರಿಯಾದರೂ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಗುತ್ತದೋ ಇಲ್ಲವೋ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ.