ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ವೀರಾಂಜನೆಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಹರಪನಹಳ್ಳಿ: ಮುಕ್ತಿಗೋಸ್ಕರ ತಪಸ್ಸಿಗೆ ಕುಳಿತ ಆಂಜನೇಯ ಸ್ವಾಮಿ, ವೀರಭದ್ರ ಸ್ವಾಮಿಯ ಆಶೀರ್ವಾದದ ಬಳಿಕ ವೀರಾಂಜನೇಯರಾಗಿ ರೂಪುಗೊಂಡರು ಎಂದು ರಾಮಘಟ್ಟ ಪುರವರ್ಗ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಉಚ್ಚಂಗಿದುರ್ಗ ಗ್ರಾಮದ ರೇಣುಕಾ ಬಡಾವಣೆಯಲ್ಲಿ ವೀರಾಂಜನೆಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶನಿವಾರ ಆಶೀರ್ವಚನ ನೀಡಿದರು. ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಪದನ್ನೋತಿಗೆ ಆಂಜನೇಯ ಸ್ವಾಮಿಗೆ ವೀರಾಂಜನೆಯ ನಾಮಕರಣ ಮಾಡಲಾಗಿದೆ. ಹರಕೆ ಹೊತ್ತ ನಾಸ್ತಿಕರು, ದೀನ-ದಲಿತರು, ಆರ್ಥಿಕ ದುರ್ಬಲರ ರಕ್ಷಣೆಗೆ ವೀರಾಂಜನೇಯ ಜತೆಗೆ ಇದ್ದಾರೆ ಎಂದರು.
ಉಚ್ಚಂಗಿದುರ್ಗ ರಾಜರ ಮನೆತನದ ಗುರುಮಠ ಅವನತಿಯತ್ತ ಸಾಗಿದೆ. ಗ್ರಾಮದಲ್ಲಿ ಎಲ್ಲೆಡೆ ದೇವಸ್ಥಾನ ಕಟ್ಟಿ, ಜೀರ್ಣೋದ್ಧಾರದೊಂದಿಗೆ ಪುರಾತನ ಮಠದ ಅಭಿವೃದ್ಧಿ ಆಗಬೇಕು. ಇಂದಿನ ಮಠಗಳು ಒಂದು ಸಮುದಾಯಕ್ಕೆ ಸೀಮಿತಗೊಳ್ಳುತ್ತಿವೆ. ಮಾನವ ಧರ್ಮ ಒಂದೇ ಎನ್ನುವ ವಾಣಿಯಂತೆ ಬದುಕಬೇಕು ಎಂದರು.
ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಸಕಲ ಜೀವರಾಶಿಯಲ್ಲಿ ದೈವತ್ವ ಕಾಣಬೇಕು. ಆರಾಧನೆಯಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಮಳೆ-ಬೆಳೆ ಸುಭಿಕ್ಷವಾಗಿ ಇರಲಿ ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಉಚ್ಚಂಗಿದುರ್ಗ ಐತಿಹಾಸಿಕ ಪ್ರಸಿದ್ಧವಾಗಿರುವುದರೊಂದಿಗೆ ದೇವಸ್ಥಾನಗಳ ತವರು ಎನಿಸಿದೆ. ಹಿರಿಯರು ಕಟ್ಟಿರುವ ದೇವಸ್ಥಾನ ಶ್ರದ್ಧಾ ಕೇಂದ್ರಗಳಾಗಬೇಕು. ಭಕ್ತಿ ಹಾಗೂ ನಂಬಿಕೆಗೆ ಹೆಸರುವಾಸಿಯಾಗಿರುವ ವೀರಾಂಜನೆಯ ದೇವರ ಪೂಜೆ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಭಕ್ತಿಯಂತೆ ಸಂವಿಧಾನವನ್ನೂ ಪ್ರೀತಿಸಿ ಗೌರವಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.
ಮಹಾಂತೇಶ್ ನಾಯ್ಕ, ಮಡ್ರಳ್ಳಿ ಕೆಂಚಪ್ಪ, ಎಂ.ಕುಮಾರ್, ಶೇಖರಪ್ಪ, ಮಂಜಪ್ಪ, ಸೋಮಶೇಖರ್ ಗೌಡ, ಅಂಕಳಪ್ಪ, ಶ್ರೀ ವೀರಾಂಜನೆಯ ಸೇವಾ ಸಮಿತಿ ಪದಾಧಿಕಾರಿಗಳು ಇದ್ದರು.