ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಸೋಮವಾರ ನಡೆದ ಬಸವ ಜಯಂತಿ ಹಾಗೂ ಸಾಮೂಹಿಕ ಮದುವೆ ಕಾರ್ಯಕ್ರಮದ ನಿಮಿತ್ತ ಬಸವೇಶ್ವರ ಪುತ್ತಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಪುಷ್ಪ ನಮನಸಲ್ಲಿಸಿದರು. ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಹೂಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಎಎಸ್ಪಿ ಮಂಜುನಾಥ ಇತರರಿದ್ದರು.
ಬಸವ ಜಯಂತಿಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಕರೆ
ಹೊಸಪೇಟೆ: ಕಾಯಕವೇ ಕೈಲಾಸ ಎಂದು ಸಾರಿದ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಸಮ ಸಮಾಜ ನಿರ್ಮಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಕರೆ ನೀಡಿದರು.
ನಗರದ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಸೋಮವಾರ ನಡೆದ ಬಸವ ಜಯಂತಿ ಹಾಗೂ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಣ್ಣನವರು ಜಾತ್ಯತೀತ ವಿವಾಹಗಳ ಮೂಲಕ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದರು. ಅವರ ಈ ತತ್ತ್ವವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ಕೊಟ್ಟೂರುಸ್ವಾಮಿ ಸಂಸ್ಥಾನದಿAದ ಬಸವ ಜಯಂತಿಯ ನಿಮಿತ್ತ 29 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸಿರುವುದು ಸಂತಸದ ಸಂಗತಿಯಾಗಿದೆ. ಪ್ರತಿಯೊಬ್ಬರು ಬಸವಣ್ಣನವರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ತತ್ವದಂತೆ ಭೇದಭಾವ ಅಳಿದು ಸಮ ಸಮಾಜ ನಿರ್ಮಾಣವಾಗಬೇಕು ಎಂದರು.
ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರು ಸ್ತ್ರೀ ಕುಲಕ್ಕೆ ಸ್ವಾತಂತ್ರ‍್ಯ ಮತ್ತು ಗೌರವ ನೀಡಿದ ಜಗತ್ತಿನ ಮೊದಲ ವ್ಯಕ್ತಿ. ಜಾತಿ, ಮತ ಮತ್ತು ಲಿಂಗ ಭೇದವಿಲ್ಲದ ಸಮಾಜ ನಿರ್ಮಾಣ ಬಸವಣ್ಣನವರ ಗುರಿಯಾಗಿತ್ತು. ಅದರಂತೆ ಸಮಾಜ ಸುಧಾರಣೆಗೆ ವ್ಯಕ್ತಿ ಸುಧಾರಣೆ ಮುಖ್ಯವಾಗಿದ್ದು, ಬಸವಣ್ಣನವರ ವ್ಯಕ್ತಿತ್ವ ನಮಗೆ ಸದಾ ಆದರ್ಶವಾಗಿದೆ. ಬಸವಣ್ಣನವರು ಹಾಕಿಕೊಟ್ಟ ಇವನಾರವ ಇವನಾರವ ಎನ್ನದೆ ಇವ ನಮ್ಮವ ಎಂಬ ವಿಶ್ವ ಬಂಧುತ್ವದ ತತ್ವ ಈ ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ಹೂಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಎಸ್ಪಿ ಜಾಹ್ನವಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಎಎಸ್ಪಿ ಮಂಜುನಾಥ, ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ, ತಹಸೀಲ್ದಾರ್ ಶೃತಿ ಇತರರಿದ್ದರು.
ಅದಕ್ಕೂ ಮುನ್ನ ನಗರದ ಬಸವೇಶ್ವರ ಪುತ್ತಳಿಗೆ ಮಾಲಾಪರ್ಣೆ ಮಾಡಲಾಯಿತು. ನಂತರ ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದ ಮುಂದೆ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ವೃತ್ತಗಳ ಮೂಲಕ ಕೊಟ್ಟೂರು ಸ್ವಾಮಿ ಸಂಸ್ಥಾನ ವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ ಕಲಾ ತಂಡಗಳು ನೋಡುಗರ ಮೈ ನವಿರೇಳಿಸಿತು.