ಅರಿವಿನ ಗವಿಯಲ್ಲಿ ಅಪ್ಪಣ್ಣ ಮೂರ್ತಿ ಪ್ರತಿಷ್ಠಾಪಿಸಲಿ

ಕೊಟ್ಟೂರಿನಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾಗೆ ತಾಲೂಕು ಹಡಪದ ಅಪ್ಪಣ್ಣ ಸೇವಾ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕೊಟ್ಟೂರಿನಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾಗೆ ತಾಲೂಕು ಹಡಪದ ಅಪ್ಪಣ್ಣ ಸೇವಾ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
Published on
ಕೊಟ್ಟೂರು: ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಬಳಿಯಿರುವ ಹಡಪದ ಅಪ್ಪಣ್ಣ ಅರಿವಿನ ಗವಿಯಲ್ಲಿ ಅಪ್ಪಣ್ಣ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಎಂ.ಪ್ರತಿಭಾಗೆ ತಾಲೂಕಿನ ಶಿವಶರಣ ಹಡಪದ ಅಪ್ಪಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಹಡಪದ ಸಮಾಜದ ಜಿಲ್ಲಾ ಪ್ರತಿನಿಧಿ ಎಚ್.ಸಿದ್ಧಲಿಂಗಸ್ವಾಮಿ ಮಾತನಾಡಿ, ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12 ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ಹಡಪದ ಅಪ್ಪಣ್ಣ ವಿಶ್ವಗುರು ಬಸವಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಇದರಿಂದಾಗಿ ಶಿವಶರಣ ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿ ಹಸ್ತಕ್ಷೇಪ ಮಾಡಿ ಅನ್ಯ ಶರಣರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿರುವುದು ಖೇದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ಶಿವಶರಣ ಹಡಪದ ಅಪ್ಪಣ್ಣ ಹಾಗೂ ನಮ್ಮ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟಾಗಿದೆ. ನಮ್ಮ ಶರಣರ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ. ನಮ್ಮ ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಶರಣ ಹಡಪದ ಅಪ್ಪಣ್ಣ ಅವರಿಗೆ ಆಗೌರವ ಮಾಡಿರುವ ಪಂಚಕಮಿಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಡಪದ ಅಪ್ಪಣ್ಣ ಅವರ ಅರಿವಿನ ಗವಿಯಲ್ಲಿ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು. ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿಯನ್ನು ಪ್ರಾಧಿಕಾರದ ಸದಸ್ಯರನ್ನಾಗಿಸಿ ಅಭಿವದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು.
ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಎಚ್.ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ನಾಗರಾಜ್, ಸದಸ್ಯರಾದ ಪ್ರಕಾಶ, ಹರೀಶ್, ಬಸವರಾಜ್, ನಾಗರಾಜ್,ಅಣ್ಣಪ್ಪ, ಗುರುಸಿದ್ದಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net