ಭೂಮಾಪಕರ ಸೇವೆ ಕಾಯಂಗೊಳಿಸಲಿ

ಸರ್ಕಾರಿ ಪರವಾನಗಿ ಭೂಮಾಪಕರ ಸೇವೆ ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೂಡ್ಲಿಗಿಯಲ್ಲಿ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಮಹಾಲಿಂಗಪ್ಪ ಮಾತನಾಡಿದರು.
ಸರ್ಕಾರಿ ಪರವಾನಗಿ ಭೂಮಾಪಕರ ಸೇವೆ ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೂಡ್ಲಿಗಿಯಲ್ಲಿ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ಆಯೋಜಿಸಿದ್ದ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಮಹಾಲಿಂಗಪ್ಪ ಮಾತನಾಡಿದರು.
Published on
ಕೂಡ್ಲಿಗಿ: ಸರ್ಕಾರದಿಂದ ಪರವಾನಗಿ ಪಡೆದಿರುವ ಭೂಮಾಪಕರು ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡದೆ ಕಡೆಗಣಿಸಿದೆ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಬಿ.ಮಹಾಲಿಂಗಪ್ಪ ದೂರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಸುಮಾರು 132 ಜನ ಪರವಾನಗಿ ಭೂಮಾಪಕರು ರೈತರ ಜಮೀನಿನಲ್ಲಿ ಮುಟೇಷನ್ ಪೂರ್ವ ನಕ್ಷೆ ತಯಾರಿಸುವುದು, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ. ಮರುಭೂಮಾಪನ ಹಾಗೂ ಸರ್ಕಾರಿ ಕೆಲಸಗಳಾದ ಕೆರೆ ಅಳತೆ, ನಾಲಾ, ವಿದ್ಯುತ್ ಲೈನ್ ಅಳತೆ. ಹೆದ್ದಾರಿ ಅಳತೆ, ಮುಜರಾಯಿ ದೇವಸ್ಥಾನಗಳ ಅಳತೆ ಮುಂತಾದ ಎಲ್ಲ ರೀತಿಯ ಕೆಲಸಗಳನ್ನು ನಿರ್ವಹಿಸುತ್ತಾ ಬಂದಿದ್ದು. ಇದುವರೆಗೂ ಸರ್ಕಾರ ಸೇವೆ ಕಾಯಂಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಭೇಟಿ ಮಾಡಿದಾಗ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪರಿಶೀಲಿಸಲು ಪ್ರಸ್ತಾವನೆ ಮಾಡಿದರು ಯಾವುದೇ ಕ್ರಮವಾಗಿಲ್ಲ. ಇದರಂತೆ ಎಲ್ಲ ಸರ್ಕಾರಗಳಿಂದಲೂ ನಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಕಿಡಿಕಾರಿದರು.
ಆದ್ದರಿಂದ ಈಗ ಕಳೆದ ಒಂದು ತಿಂಗಳಿನಿಂದ ಯಾವುದೇ ಸರ್ವೇ ಮಾಡದೆ ಶಾಂತಿಯುತ ಹೋರಾಟ ಮಾಡಿಕೊಂಡು ಬಂದಿದ್ದು, ಈ ಕೂಡಲೇ ನಮ್ಮ ಬೇಡಿಕೆಗಳಾದ ಸೇವೆ ಕಾಯಂಗೊಳಿಸಬೇಕು. ಸೇವಾಭದ್ರತೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ಮತ್ತು ಜೀವ ವಿಮೆ ನೀಡಬೇಕು. ಬಾಂದು ಜವಾನರ ಪೂರೈಕೆ ಅತ್ಯಗತ್ಯವಾಗಿ ಮಾಡಬೇಕು ಎಂದು ಆಗ್ರಹಿಸಿದರು. ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಸರ್ವೇ ಮಾಡದೆ ಕರ್ತವ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ರಾಜ್ಯ ರೈತಸಂಘ ಹಾಗೂ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ದೇವರಮನಿ ಮಹೇಶ್, ಸ್ನೇಹಿತರ ಬಳಗದ ಅಧ್ಯಕ್ಷ ರೆಹಮಾನ, ಸಣ್ಣಯ್ಯ, ಪಿ.ನಿಂಗಪ್ಪ, ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ತಾಲೂಕು ಅಧ್ಯಕ್ಷ ಎಚ್.ನಾಗರಾಜ, ಗೌರವಾಧ್ಯಕ್ಷ ಕೆ.ಮಂಜಣ್ಣ, ಎಚ್.ಪ್ರಕಾಶ್, ಎಂ.ಟಿ.ನಾಗರಾಜ, ಪ್ರದೀಪ್ ಕುಮಾರ್, ಎನ್.ಕೆ.ಶರಣಪ್ಪ, ಸಿ.ಆರ್.ವೀರೇಶ್, ಯು.ದುರುಗಪ್ಪ, ಜಿ.ಆರ್.ತಿಪ್ಪೇಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net