ಕೂಡ್ಲಿಗಿ: ಅತ್ಯಂತ ಹಿಂದುಳಿದ ತಾಲೂಕು ಆಗಿರುವ ಕೂಡ್ಲಿಗಿಯಲ್ಲಿ ಬಡಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸಬೇಕೆಂದು ವೈದ್ಯಾಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಸೂಚಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರುತರ ಜವಾಬ್ದಾರಿಯಾಗಿದೆ. ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಪ್ರತಿಯೊಂದು ನಿರ್ಧಾರಗಳನ್ನು ಆರೋಗ್ಯ ರಕ್ಷಾ ಸಮಿತಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಸಾರ್ವಜನಿಕರಿಗೆ ಸದಾ ಗುಣಮಟ್ಟದ ಸೇವೆ ಸಿಗುವಂತಾಗಬೇಕು. ಬಡರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡು ಬರುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗದಂತೆ, ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು. ಅವ್ಯವಹಾರ ಹಾಗೂ ನಿರ್ಲಕ್ಷ್ಯಕ್ಕೆ ಅವಕಾಶ ಇಲ್ಲ ಎಂಬುದನ್ನು ಸಿಬ್ಬಂದಿ ಮನಗಾಣಬೇಕು ಎಂದು ತಿಳಿಸಿದರು.
ಮೂಲ ಸೌಕರ್ಯಗಳ ಸುಧಾರಣೆ, ಔಷಧ ಲಭ್ಯತೆ ಹಾಗೂ ಸಿಬ್ಬಂದಿ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಎನ್,ಟಿ.ಶ್ರೀನಿವಾಸ ಭರವಸೆ ನೀಡಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಪುಷ್ಪಾ ಎನ್.ಟಿ.ಶ್ರೀನಿವಾಸ್, ಹೊನ್ನೂರಪ್ಪ, ಬಿ.ವೀರಭದ್ರಪ್ಪ ಮೊರಬ, ಡಿ.ಎಚ್.ದುರುಗೇಶ, ಪಾಪಯ್ಯ, ಎನ್.ದಿನೇಶ, ಮಾದಿಹಳ್ಳಿ ನಜೀರ್, ಡಿ.ಬಿ.ಚಿತ್ತಪ್ಪ, ಪ್ರಮುಖರಾದ ಕೋಗಳಿ ಮಂಜುನಾಥ, ಎಸ್.ವೆಂಕಟೇಶ, ಉಮೇಶ, ಆಸ್ಪತ್ರೆ ಸಿಬ್ಬಂದಿ ಇದ್ದರು.