ಹೂವಿನಹಡಗಲಿ: ರೈತರು ರಸಗೊಬ್ಬರ ಖರೀದಿಗೆ ಸರ್ಕಾರ ಜಾರಿ ಮಾಡಿರುವ ಎಫ್‌ಐಡಿ ನಿಯಮ ಸಡಿಸಲಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕ ಅಧ್ಯಕ್ಷ ಎಚ್.ಸಿದ್ದಪ್ಪ ಮಾತನಾಡಿ, ರಾಜ್ಯದ ರೈತರು ಜಮೀನಿಗೆ ಹಾಕುವುದಕ್ಕಾಗಿ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯಗೊಳಿಸಿದಲಾಗಿದೆ. ಆದರೆ ರೈತರು ಎಫ್‌ಐಡಿ ಪಡೆಯಲು ಕೆಲ ತಾಂತ್ರಿಕ ತೊಂದರೆಗಳಿವೆ. ಅನೇಕ ರೈತರ ಜಮೀನಿನ ಹಕ್ಕು ಬದಲಾವಣೆಯಾಗಿಲ್ಲ. ಒಂದು ಎಕರೆ ಜಮೀನಿಗೆ ಒಂದು ಚೀಲ ಮಾತ್ರ ಯೂರಿಯಾ ರಸಗೊಬ್ಬರ ನಿಯಮ ಸರಿಯಲ್ಲ. ಈ ನಿಯಮದಿಂದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮ ಸಡಿಲಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಜ, ಗೌರವ ಅಧ್ಯಕ್ಷ ಪಕ್ಕೀರಪ್ಪ, ಜಿಲ್ಲಾ ಉಪಾಧ್ಯಕ್ಷ ಕೆ.ಘನಿಸಾಬ್, ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಎಚ್.ದುರುಗಪ್ಪ, ಸಂಘಟನಾ ಕಾರ್ಯದರ್ಶಿ ಡಿ.ಗಿರೀಶ್ ಇತರರಿದ್ದರು.