

ಪ್ರಮುಖ ಮುಖ್ಯಾಂಶಗಳು
ಹೊಸಪೇಟೆ: ಮಾಹಿತಿ ಜ್ಞಾನವಾಗಿ, ಜ್ಞಾನ ತಿಳುವಳಿಕೆಯಾಗಿ ಪರಿವರ್ತನೆಯಾಗಬೇಕು. ಹೆಚ್ಚಿನ ಅರಿವು ಮತ್ತು ತಿಳುವಳಿಕೆಯನ್ನು ಪಡೆದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಕುವೆಂಪು ವಿವಿಯ ಸಹಾಯಕ ಕುಲಸಚಿವ ಎಚ್.ಎನ್.ಸುಬ್ರಮಣ್ಯ ಅಭಿಪ್ರಾಯಪಟ್ಟರು.
ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಹಿತಿಹಕ್ಕು ಕಾಯ್ದೆ-2005ರ ಜಾಗೃತಿ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಮಗೆ ಅಗತ್ಯವಾದ ಮಾಹಿತಿಯು ಬಹುಪಾಲು ಸಾಮಾಜಿಕ ಜಾಲತಾಣಗಳ ಮೂಲಕ ಲಭ್ಯವಾಗುತ್ತಿದೆ. ಮಾಹಿತಿಯನ್ನು ಯಾವ ಸಂದರ್ಭದಲ್ಲಿ, ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬ ಅರಿವು ಅಗತ್ಯವಾಗಿದೆ. ಮಾಹಿತಿ ಕೇವಲ ಮಾಹಿತಿ ಆಗಿ ಉಳಿಯದೇ, ಅದು ಜ್ಞಾನವಾಗಿ ಪರಿವರ್ತನೆಯಾಗಬೇಕು. ಜ್ಞಾನವೇ ವ್ಯಕ್ತಿಯ ನಿಜವಾದ ಆಸ್ತಿಯಾಗಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಮಾಹಿತಿಯನ್ನು ಕೇಳಿದಾಗ ಅದನ್ನು ನಿಖರವಾಗಿ ನೀಡಬೇಕು. ಇಲ್ಲಿ ಕಥೆ ಹೇಳಲು ಅಥವಾ ಅನಗತ್ಯ ವಿವರಣೆ ನೀಡಲು ಅವಕಾಶ ಇರುವುದಿಲ್ಲ. ವಿಶೇಷವಾಗಿ ತನಿಖೆ ಹಾಗೂ ವಿಚಾರಣೆಯಲ್ಲಿರುವ ಮಾಹಿತಿಯನ್ನು ನೀಡುವ ಸಂದರ್ಭದಲ್ಲಿ ಎಚ್ಚರಿಕೆ ಅಗತ್ಯ ಎಂದರು.
ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಕಾಲಘಟ್ಟದಲ್ಲಿ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ, ಸರಳವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹಾಗೂ ಮುಂದೆ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸಲು ಕಾನೂನಿನ ಕುರಿತು ಸಮಗ್ರ ತಿಳುವಳಿಕೆ ಇರಬೇಕು. ಕಾನೂನುಗಳಲ್ಲಿ ಕಾಲಘಟ್ಟಕ್ಕೆ ಅನುಗುಣವಾಗಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಸರ್ಕಾರಿ ನೌಕರರು ತಮ್ಮ ಸೇವಾ ಸವಲತ್ತುಗಳು, ಸೇವಾ ಭಡ್ತಿ ಹಾಗೂ ಆಡಳಿತಾತ್ಮಕ ನಿಯಮಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಉಪಕುಲಸಚಿವ ಬಿ.ಗುರುಬಸಪ್ಪ, ಮಾಹಿತಿಕೇಂದ್ರದ ಮುಖ್ಯಸ್ಥೆ ಶಕುಂತಲಾ ಚೌಡನಾಯ್ಕ, ಆರ್.ವಿ.ದೇಶಪಾಂಡೆ, ಸಹಾಯಕ ಕುಲಸಚಿವ ಎಚ್.ಶ್ರೀನಿವಾಸ ಇತರರಿದ್ದರು.