ವಿಜಯನಗರದಲ್ಲಿ ಫ್ಲಾಪ್ ಆಯ್ತಾ ಕರ್ನಾಟಕ ಬಂದ್

ಹೊಸಪೇಟೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಜನಜೀವನ
ಹೊಸಪೇಟೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಜನಜೀವನ
Published on

ಪ್ರಮುಖ ಮುಖ್ಯಾಂಶಗಳು

  • ಕೇವಲ ನೈತಿಕ ಬೆಂಬಲಕ್ಕಷ್ಟೇ ಸೀಮಿತ
  • ಯಥಾಸ್ಥಿತಿ ಕಾಯ್ದುಕೊಂಡ ಜನಜೀವನ
ಹೊಸಪೇಟೆ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್'ಗೆ ವಿಜಯನಗರ ಜಿಲ್ಲೆಯಲ್ಲಿ ಸಂಪೂರ್ಣ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾದ್ಯಂತ ಬಂದ್ ಬಿಸಿ ತಟ್ಟದೇ, ಜನಜೀವನ ಸಂಪೂರ್ಣ ಯಥಾಸ್ಥಿತಿಯಲ್ಲಿ ಸಾಗಿದೆ.
ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಜಿಲ್ಲೆಯ ಆರೂ ತಾಲೂಕುಗಳಲ್ಲಿಯೂ ಬಂದ್ ವಾತಾವರಣ ಕಂಡುಬರಲಿಲ್ಲ. ಸಾರ್ವಜನಿಕರು, ರೈತ ಸಂಘಟನೆಗಳು ಹಾಗೂ ವಿವಿಧ ಒಕ್ಕೂಟಗಳು ಬಂದ್‌ಗೆ ಕೇವಲ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿದ್ದರಿಂದ ರಸ್ತೆಗಳಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ಅಡೆತಡೆ ಉಂಟಾಗಲಿಲ್ಲ.
ಬೆಳಗಿನಿAದಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಆಟೋರಿಕ್ಷಾ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನAತೆ ಸಾಂಗವಾಗಿ ನಡೆಯಿತು. ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಹರಿವು ಸಾಮಾನ್ಯ ಸ್ಥಿತಿಯಲ್ಲೇ ಇತ್ತು. ಇನ್ನು ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಹೊಟೇಲ್‌ಗಳು ಹಾಗೂ ಮಾರುಕಟ್ಟೆ ಪ್ರದೇಶಗಳು ತೆರೆದಿದ್ದು, ವ್ಯಾಪಾರ-ವಹಿವಾಟು ದಿನನಿತ್ಯದಂತೆಯೇ ಮುಂದುವರೆಯಿತು.

ಉತ್ತರ-ದಕ್ಷಿಣ ಕರ್ನಾಟಕದ ಹೋರಾಟದ ತಾರತಮ್ಯ

ಬಂದ್‌ಗೆ ಸಕ್ರಿಯ ಬೆಂಬಲ ನೀಡದಿರಲು ಸ್ಥಳೀಯ ರೈತರು ಹಾಗೂ ಸಾರ್ವಜನಿಕರು ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಕಾವೇರಿ ನೀರು ಹಂಚಿಕೆ ಸೇರಿದಂತೆ ದಕ್ಷಿಣ ಕರ್ನಾಟಕದ ರೈತರ ಪ್ರತಿಯೊಂದು ಸಮಸ್ಯೆಗೂ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಹೋರಾಟಗಳು ನಡೆಯುತ್ತವೆ. ಆದರೆ, ತುಂಗಭದ್ರಾ ಮತ್ತು ಕೃಷ್ಣಾ ನದಿ ತೀರದ ರೈತರು ಎದುರಿಸುತ್ತಿರುವ ಭೀಕರ ಅಭಾವ, ಜಲವಿವಾದ ಹಾಗೂ ಸ್ಥಳೀಯ ಸಮಸ್ಯೆಗಳ ವಿಷಯ ಬಂದಾಗ ದಕ್ಷಿಣ ಕರ್ನಾಟಕದ ಭಾಗದಿಂದ ಸೂಕ್ತ ಬೆಂಬಲವಾಗಲಿ, ಪ್ರತಿಕ್ರಿಯೆಯಾಗಲಿ ಸಿಗುವುದಿಲ್ಲ ಎಂದು ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ತೀವ್ರ ಬೇಸರದ ಮತುಗಳು. ಈ ನಿಲುವು ಬಂದ್‌ಗೆ ಸಕ್ರಿಯವಾಗಿ ಧುಮುಕದಿರಲು ಪ್ರಮುಖ ಕಾರಣವಾಯಿತು ಎಂದು ಹಲವರು ಅಭಿಪ್ರಾಯಪಟ್ಟರು.

ಬೀಗಿ ಪೊಲೀಸ್ ಬಂದೋಬಸ್ತ್

ಅಪ್ರಿಯ ಘಟನೆಗಳು ಸಂಭವಿಸದAತೆ ತಡೆಯಲು ಮತ್ತು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಪ್ರಮುಖ ವೃತ್ತಗಳು, ಸರ್ಕಾರಿ ಕಚೇರಿಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿತ್ತು. ಒಟ್ಟಾರೆಯಾಗಿ, ರಾಜ್ಯಾದ್ಯಂತ ಶಮನವಿಲ್ಲದ ಬಂದ್ ವಾತಾವರಣವಿದ್ದರೂ ವಿಜಯನಗರ ಜಿಲ್ಲೆಯಲ್ಲಂತೂ ಪ್ರತಿಯೊಂದು ಚಟುವಟಿಕೆಯೂ ಸುಸೂತ್ರವಾಗಿ ನೆರವೇರಿತು.
"

ಪ್ರತಿ ಬಾರಿಯೂ 'ದಕ್ಷಿಣದ' ಸಮಸ್ಯೆಯೇ ಇಡೀ ರಾಜ್ಯದ ಸಮಸ್ಯೆಯಾಗುತ್ತದೆ. ಆದರೆ ಉತ್ತರ ಕರ್ನಾಟಕದ ತುಂಗಭದ್ರಾ ಮತ್ತು ಕೃಷ್ಣಾ ತೀರದ ರೈತರ ಕೂಗು ಎಂದಿಗೂ ಬೆಂಗಳೂರು ತಲುಪುವುದೇ ಇಲ್ಲ. ಈ ಬಾರಿಯ ಬಂದ್‌ಗೆ ಬೆಂಬಲ ನೀಡದಿರುವುದು ನಮ್ಮ ಅಸಹಕಾರ ಅಲ್ಲ, ನಮ್ಮ ಮೇಲಾಗುತ್ತಿರುವ ನಿರಂತರ ನಿರ್ಲಕ್ಷ್ಯದ ವಿರುದ್ಧದ ಮೌನ ಪ್ರತಿಭಟನೆ.

— ಸಣ್ಣಕ್ಕಿರುದ್ರಪ್ಪ, ರೈತ ಮುಖಂಡ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net