ಕನಕದಾಸರ ಜಯಂತ್ಯೋತ್ಸವದಲ್ಲಿ ರಶ್ಮಿ ರಾಜಶೇಖರ ಹಿಟ್ನಾಳ್ ಅಭಿಪ್ರಾಯ
ಹೊಸಪೇಟೆ: ಅಸಮಾನತೆ ತೊರೆದು ಹಾಕಿ, ಜಾತಿ ರಹಿತ ಸಮಾಜ ನಿರ್ಮಿಸುವಲ್ಲಿ ಕನಕದಾಸರ ಬದುಕು ಮಾನವ ಸಮಾಜಕ್ಕೆ ಆದರ್ಶ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಪತ್ನಿ ರಶ್ಮಿ ಅಭಿಪ್ರಾಯಪಟ್ಟರು.
ತಾಲೂಕಿನ ಕಮಲಾಪುರದಲ್ಲಿ ಪುರಸಭೆ, ಹಾಲುಮತ ಸಮಾಜದ ಸಹಯೋಗದಲ್ಲಿ ಕನಕದಾಸರ 538ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 15ನೇ ಶತಮಾನದ ವೇಳೆಯಲ್ಲಿ ಜಾತಿಯ ಆಧಾರದ ಮೇಲೆ ಆಗುತ್ತಿರುವ ಅಸಮಾನತೆ ಹಾಗೂ ಅಸ್ಪೃಶ್ಯತೆ ವ್ಯವಸ್ಥೆಯನ್ನು ತೊಡೆದು ಹಾಕಲು ತಮ್ಮ ಕೀರ್ತನೆಗಳ ಮೂಲಕ ಸಮ ಸಮಾಜ ನಿರ್ಮಿಸಲು ಮುಂದಾದರು. ಹಾಗೆ ಆಧುನಿಕ ಸಮಾಜದಲ್ಲಿ ಸಮಾನತೆ ತರಲು ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಪ್ರತಿಯೊಬ್ಬ ಭಾರತೀಯನು ಸಮಾನ ಅವಕಾಶಗಳೊಂದಿಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ನೀಡಿದೆ ಎಂದರು.
ಹುಡಾ ಅಧ್ಯಕ್ಷರಾದ ಎಚ್.ಎನ್.ಇಮಾಮ್ ನಿಯಾಜಿ, ಪುರಸಭೆ ಮುಖ್ಯಾಧಿಕಾರಿ ಈರಣ್ಣ, ಸದಸ್ಯ ಮಾಳ್ಗಿ ರಾಮಸ್ವಾಮಿ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಡಿಗೇರ ವೆಂಕಟೇಶ್, ಪ್ರಮುಖರಾದ ಯರಂಗಳಿ ಹನುಮಂತಪ್ಪ, ಗೋಣಿಬಸಪ್ಪ, ಕೆ.ಕರಿಬಸಪ್ಪ, ಕೆ.ರಮೇಶ್, ಕೆ.ಪ್ರವೀಣ್ ಕುಮಾರ್ ಇತರರಿದ್ದರು.