ಸಂಘದ ಜಂಟಿ ಕಾರ್ಯದರ್ಶಿ ಟಿ.ಜಿ.ವಿಠಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 1995ರಲ್ಲಿ ಸ್ಥಾಪನೆಯಾದ ಎಐಐಪಿಎ, ಎಲ್‌ಐಸಿ ಹಾಗೂ ಜಿಸಿಐನ ಎಲ್ಲಾ ವರ್ಗದ ನಿವೃತ್ತ ನೌಕರರ ಹಕ್ಕುಗಳಿಗಾಗಿ ಶ್ರಮಿಸುತ್ತಿದೆ. ಕುಟುಂಬ ಪಿಂಚಣಿಯನ್ನು ಶೇ.15 ರಿಂದ ಶೇ.30ಕ್ಕೆ ಹೆಚ್ಚಿಸಿರುವುದು ಹಾಗೂ ಶೇ.75 ಪ್ರೀಮಿಯಂ ಸಬ್ಸಿಡಿಯೊಂದಿಗೆ ಗ್ರೂಪ್ ಮೆಡಿಕ್ಲೈಮ್ ಸೌಲಭ್ಯ ಕೊಡಿಸಿರುವುದು ಸಂಘದ ಪ್ರಮುಖ ಸಾಧನೆ. ಪ್ರಸ್ತುತ ಪಿಂಚಣಿ ನವೀಕರಣ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಶೇ.100 ವೈದ್ಯಕೀಯ ಸಬ್ಸಿಡಿ ನೀಡಲು ಹಾಗೂ ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಖಾಸಗೀಕರಣದ ವಿರುದ್ಧ ಹೋರಾಟ ಮುಂದುವರಿದಿದೆ ಎಂದರು.