ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಗಳ ಅಳವಡಿಕೆ ಯಶಸ್ವಿ
ಗೇಟ್ ಅಳವಡಿಕೆ ಪೂರ್ಣವಾದ ಹಿನ್ನೆಲೆಯಲ್ಲಿ ಟಿವಿಬಿ ಅಧಿಕಾರಿಗಳು ಸಂಭ್ರಮಿಸಿದರು. ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ, ಎಸ್‌ಇ ಎಸ್.ನಾರಾಯಣ ನಾಯ್ಕ, ಇಇ ಎನ್.ಚಂದೇಶೇಖರ, ಎಸ್‌ಡಿಒಗಳಾದ ಕೆ.ಜ್ಞಾನೇಶ್ವರ, ಕೆ.ಕೆ.ಕೃಷ್ಣ ಕುಮಾರ, ಎಸ್‌ಒಗಳಾದ ಜಿ.ಕಿರಣ, ಪಂಪಾಪತಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೈತರಲ್ಲಿ ಮಂದಹಾಸ
ಎರಡು ವರ್ಷದ ಆತಂಕಕ್ಕೆ ತೆರೆ
ಹೊಸಪೇಟೆ: ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತ ಕುಟುಂಬಗಳಲ್ಲಿ ಹೊಸ ಆಶಾಕಿರಣ ಮೂಡಿದೆ. ಕಳೆದ ನಾಲ್ಕು ತಿಂಗಳಿಂದ ಜಲಾಶಯದಲ್ಲಿ ಹಗಲು-ರಾತ್ರಿ ಸಮರೋಪಾದಿಯಲ್ಲಿ ನಡೆಯುತ್ತಿದ್ದ 33 ಕ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ರೈತರಿಗೆ ನೆಮ್ಮದಿ ಸಿಕ್ಕಿದೆ.
2024ರ ಆ.10ರ ರಾತ್ರಿ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿ ಬಿದ್ದಾಗ ಇಡೀ ನಾಡೇ ಆತಂಕಗೊಂಡಿತ್ತು. ಆಗ ಹರಿದು ಹೋಗುತ್ತಿದ್ದ ಅಪಾರ ನೀರನ್ನು ತಡೆಯಲು ಹರಸಾಹಸ ಪಟ್ಟು ಸ್ಟಾಪ್‌ಲಾಗ್ ಗೇಟ್ ಅಳವಡಿಸಿ ತಾತ್ಕಾಲಿಕ ಸಮಾಧಾನ ಕಂಡುಕೊಳ್ಳಲಾಗಿತ್ತು. ಆದರೆ, ಘಟನೆಯ ನಂತರ ಎರಡು ವರ್ಷಗಳ ಕಾಲ ತುಂಗಭದ್ರಾ ಆಡಳಿತ ಮಂಡಳಿ (ಟಿಬಿಬಿ) ಗೇಟ್‌ಗಳ ಬದಲಾವಣೆಗೆ ಮುಂದಾಗದ ಕಾರಣ ರೈತವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ನಿರಂತರ ಹೋರಾಟಗಳು ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದ ಟಿಬಿಬಿ, 2025ರ ಡಿ.24ರಿಂದ 33 ಕ್ರಸ್ಟ್ ಗೇಟ್ ಗಳ ಬದಲಾವಣೆ ಕಾರ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಈಗ ಆ ಬೃಹತ್ ಸಾಹಸ ಸುಖಾಂತ್ಯ ಕಂಡಿದೆ.
ಸುಮಾರು 60 ಅಡಿ ಎತ್ತರದ ಜಲರಾಶಿಯ ಮುಂದೆ ಬೃಹತ್ ಗೇಟ್‌ಗಳನ್ನು ಅಳವಡಿಸುವುದು ಅತೀ ದೊಡ್ಡ ತಾಂತ್ರಿಕ ಸವಾಲಾಗಿತ್ತು. ಆದರೆ ಗೇಟ್ ಪರಿಣತ ಕನ್ಹಯ್ಯ ನಾಯ್ಡು ಅವರ ಅನುಭವದ ಮಾರ್ಗದರ್ಶನದಲ್ಲಿ ಈ ಕಠಿಣ ಕೆಲಸ ಲೀಲಾಜಾಲವಾಯಿತು. ಹರಿಯುವ ನೀರಿನ ರಭಸದಲ್ಲೇ ಈ ಹಿಂದೆ ಸ್ಟಾಪ್‌ಲಾಗ್ ಗೇಟ್ ಹಾಕಿ ಸೈ ಎನಿಸಿಕೊಂಡಿದ್ದ ನಾಯ್ಡು ಅವರೇ ಈಗ 33 ಗೇಟ್‌ಗಳ ಬದಲಾವಣೆಯ ನೇತೃತ್ವ ವಹಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಟಿಬಿಬಿ ಸಿಬ್ಬಂದಿ ಕೂಡ ವಿರಾಮವಿಲ್ಲದೆ ಹಗಲು-ರಾತ್ರಿ ಕೆಲಸ ಮಾಡಿ ಈ ಜವಾಬ್ದಾರಿ ಮುಗಿಸಿದ್ದಾರೆ.
ಅಂತಿಮ ಹಂತದ ಕೆಲಸಗಳು
ಗೇಟ್‌ಗಳ ಅಳವಡಿಕೆ ಮುಗಿದಿದ್ದರೂ ಸಣ್ಣಪುಟ್ಟ ಫಿನಿಶಿಂಗ್ ಕೆಲಸಗಳು ನಡೆಯುತ್ತಿವೆ. ಎಂಟು ಕ್ರಸ್ಟ್ ಗೇಟ್ ಗಳ ವೆಲ್ಡಿಂಗ್ ಕಾರ್ಯ ಒಂದು ವಾರದಲ್ಲಿ ಮುಗಿಯಲಿದೆ. 12 ಗೇಟ್‌ಗಳಿಗೆ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ. ಇನ್ನು 5.8 ಕೋಟಿ ರೂ. ವೆಚ್ಚದಲ್ಲಿ ಚೆನ್ನೈನಲ್ಲಿ 33 ಕ್ರಸ್ಟ್ಗೇಟ್‌ಗಳಿಗೆ ಬೇಕಾದ 66 ಚೈನ್‌ಗಳ ತಯಾರಿಕೆ ನಡೆಯುತ್ತಿದೆ. ಮೇ ತಿಂಗಳ ಮೊದಲ ವಾರದಲ್ಲಿ ಇವುಗಳು ಜಲಾಶಯಕ್ಕೆ ಬರಲಿದ್ದು, ಬಂದ ಕೂಡಲೇ ಅಳವಡಿಸಲಾಗುವುದು ಎಂದು ಟಿಬಿಬಿ ಮೂಲಗಳು ಸ್ಪಷ್ಟಪಡಿಸಿವೆ.
ಹಸಿರಾಗಲಿದೆ ಕೃಷಿಕರ ಕನಸುಗಳು
19ನೇ ಗೇಟ್ ದುರಂತದಿಂದ ರೈತರು ಕಂಗಾಲಾಗಿದ್ದರು. ಕಳೆದ ಎರಡು ವರ್ಷ ಸರಿಯಾಗಿ ನೀರು ಸಿಗದೆ ಎರಡನೇ ಬೆಳೆ ಬೆಳೆಯುವ ಅವಕಾಶ ಕೈತಪ್ಪಿ ಹೋಗಿತ್ತು. ಆದರೆ ಈಗ ಗೇಟ್ ಅಳವಡಿಕೆ ಮುಗಿದಿರುವುದರಿಂದ ರೈತರು ನಿರಾಳರಾಗಿದ್ದಾರೆ. ಬರುವ ಮುಂಗಾರಿಗೆ ಜಲಾಶಯ ಸಂಪೂರ್ಣ ಭರ್ತಿಯಾಗಿ, ತಮ್ಮ ಜಮೀನುಗಳಿಗೆ ಕಾಲುವೆಗಳ ಮೂಲಕ ಸಮೃದ್ಧ ನೀರು ಹರಿಯಲಿದೆ ಎಂಬ ಸಂಭ್ರಮ ರೈತ ಸಮುದಾಯದಲ್ಲಿ ಮನೆಮಾಡಿದೆ.
"
ಜಲಾಶಯದಲ್ಲಿ 33 ಗೇಟ್‌ಗಳ ಅಳವಡಿಕೆ ಪೂರ್ಣವಾಗಿದೆ. ಸಣ್ಣಪುಟ್ಟ ಕಾರ್ಯಗಳು ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಪೂರ್ಣವಾಗಲಿವೆ. ಸದ್ಯ 12 ಗೇಟ್‌ಗಳ ಪೇಂಟಿಂಗ್ ಕಾರ್ಯ ಪೂರ್ಣವಾಗಿದೆ. ಹೊಸ ಚೈನ್‌ಗಳು ಮುಂದಿನ ವಾರ ಬರಲಿವೆ. ಆದಷ್ಟು ಬೇಗ ಕಾರ್ಯ ಪೂರ್ಣವಾಗಲಿದ್ದು, ಮುಂದಿನ ತಿಂಗಳ ಒಳಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ.
— ಒ.ಆರ್.ಕೆ. ರೆಡ್ಡಿ, ಕಾರ್ಯದರ್ಶಿ, ಟಿಬಿಬಿ, ಹೊಸಪೇಟೆ
"
ತುಂಗಭದ್ರಾ ಜಲಾಶಯದಲ್ಲಿ ಎಲ್ಲ ಗೇಟ್‌ಗಳ ಅಳವಡಿಕೆ ಪೂರ್ಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಇದು ರೈತರಿಗೆ ಒಳ್ಳೆಯ ಸಂದೇಶವಾಗಿದೆ. ಇನ್ನು ಚೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನು ಜಲಾಶಯಕ್ಕೆ ಹೊಸ ನೀರು ಬರುವುದರೊಳಗೆ ಪೂರ್ಣಗೊಳಿಸಬೇಕಿದೆ.