ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾತನಾಡಿದರು. ತಹಸೀಲ್ದಾರ್ ಜಿ.ಕೆ.ಅಮರೇಶ್, ಬಿಇಒ ಮೈಲೇಶ ಬೇವೂರು, ಸಿಪಿಐ ದುರುಗಪ್ಪ, ಪಿಎಸ್‌ಐ ಗೀತಾಂಜಲಿ ಶಿಂಧೆ ಇದ್ದರು.
ಕೊಟ್ಟೂರು: ಶಾಲಾ-ಕಾಲೇಜು ಗೌರವಕ್ಕಿಂತ ಮಕ್ಕಳ ಘನತೆ ಮುಖ್ಯವಾಗಿದ್ದು, ಪ್ರಾಚಾರ್ಯರು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಕ್ಕಳ ಸುರಕ್ಷತೆಗೆ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಹೇಳಿದರು.
ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಸ್ಥಳೀಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. 2012ರಲ್ಲಿ ಜಾರಿಗೆ ಬಂದ ಪೋಕ್ಸೋ ಮಕ್ಕಳ ಸುರಕ್ಷತೆಗೆ ಜಾರಿಗೊಳಿಸಿದ ಅತ್ಯಂತ ಕಠಿಣ ಕಾಯ್ದೆಯಾಗಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆದ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ, ನಿರ್ಲಕ್ಷಿಸಿದವರೂ ತಪ್ಪಿತಸ್ಥರು ಆಗಬೇಕಾಗುತ್ತದೆ. ಹೊಂದಾಣಿಕೆಗೆ ಇಲ್ಲಿ ಅವಕಾಶ ಇರುವುದಿಲ್ಲ ಎಂದು ಎಚ್ಚರಿಸಿದರು.
ಮಕ್ಕಳು ಹಾಗೂ ಶಿಕ್ಷಣ ಸಂಸ್ಥೆಗಳ ಸುರಕ್ಷತಾ ದೃಷ್ಟಿಯಿಂದ ಶಾಲಾ-ಕಾಲೇಜು ಆವರಣ ಮತ್ತು ವಾಹನಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಹಾಗೂ ದೂರು ಪೆಟ್ಟಿಗೆಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಗುಡ್ ಟಚ್-ಬ್ಯಾಡ್ ಟಚ್ ಬಗ್ಗೆ ಮಕ್ಕಳಿಗೆ ಸೂಕ್ತ ಮಾಹಿತಿ ನೀಡಬೇಕು. ಮಕ್ಕಳ ವರ್ತನೆಯಲ್ಲಿ ಗುಣಾತ್ಮಕ ಬದಲಾವಣೆಗೆ ತಿಂಗಳಿಗೊಮ್ಮೆ ಕೌನ್ಸ್‌ಲಿಂಗ್ ನಡೆಸಬೇಕು. ಬೋಧಕರು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಪರ ಮಾಹಿತಿ ತಿಳಿಯಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್ ಜಿ.ಕೆ.ಅಮರೇಶ್, ಬಿಇಒ ಮೈಲೇಶ ಬೇವೂರು, ಸಿಪಿಐ ದುರುಗಪ್ಪ, ಪಿಎಸ್‌ಐ ಗೀತಾಂಜಲಿ ಶಿಂಧೆ, ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ, ತಾಲೂಕಿನ ಎಲ್ಲ ಶಾಲಾ-ಕಾಲೇಜಿನ ಆಡಳಿತ ಮಂಡಳಿ ಪದಾಧಿಕಾರಿಗಳು, ಪ್ರಾಚಾರ್ಯರು, ಮುಖ್ಯಶಿಕ್ಷಕರು ಇದ್ದರು.