ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರೂ ದೈನಂದಿನ ಕರ್ತವ್ಯದಲ್ಲಿ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಮೈಗೂಡಿಸಕೊಳ್ಳಬೇಕು. ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ಮೋಹಿದ್ದೀನ್ ಹೇಳಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ, ಪುರಸಭೆ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ.ಪ್ರಭಾಕರ್ ಮಾತನಾಡಿ, ನಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡಲ್ಲಿ ಪ್ರದೇಶ ಸುಂದರವಾಗಿರುತ್ತದೆ. ಜನರು ಮನೆಯ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸ ವಿಲೇವಾರಿ ವಾಹನಗಳಲ್ಲಿ ಹಾಕಬೇಕು ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಮನೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಚರಂಡಿಗಳಿಗೆ ಚೆಲ್ಲದೆ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಬಳಸಬಾರದು ಎಂದು ಸಲಹೆ ನೀಡಿದರು.
ಸರ್ಕಾರಿ ಅಭಿಯೋಜಕ ಟಿ.ರಾಘವೇಂದ್ರ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಆಂಜನೇಯ, ಕಾರ್ಯದರ್ಶಿ ದಾದಮ್ಮನವರ ಮಂಜುನಾಥ, ಜಂಟಿ ಕಾರ್ಯದರ್ಶಿ ಕೆ.ಪ್ರಹ್ಲಾದ್, ಸದಸ್ಯರಾದ ಎಸ್.ಎಸ್.ಮಲ್ಲಿಕಾರ್ಜುನ ಮತ್ತಿತರರು ಇದ್ದರು.