ಸ್ವಾತಂತ್ರ‍್ಯೋತ್ಸವ ಧ್ವಜಾರೋಹಣದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಕೊನೆ ಕ್ಷಣದ ಉಸ್ತುವಾರಿ ಬದಲಾವಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಆರೋಗ್ಯದಲ್ಲಿ ತೊಂದರೆ ಇದ್ದ ಕಾರಣದಿಂದಲೇ ಈ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ. ಖಾತೆ ಅಥವಾ ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಿನ್ನೆಯಷ್ಟೇ ಸಚಿವ ಜಮೀರ್ ಅಹ್ಮದ್ ಅವರು ನನಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ವಿಜಯನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಪ್ರಮುಖ ಯೋಜನೆಗಳ ಕುರಿತು ನಮ್ಮ ನಡುವೆ ಸುದೀರ್ಘ ಚರ್ಚೆ ನಡೆದಿದೆ ಎಂದರು.