ಹೊಯ್ಸಳರ ಕಾಲದ ದಾನ ಶಾಸನ ಪತ್ತೆ

ಗುಂಡ್ಲವದ್ದಿಗೇರಿ ಹೊಲವೊಂದರಲ್ಲಿ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನ ಶೋಧ ಅಗಿರುವುದು.
ಗುಂಡ್ಲವದ್ದಿಗೇರಿ ಹೊಲವೊಂದರಲ್ಲಿ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನ ಶೋಧ ಅಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ತಿರುಗಾಟ ಸಂಶೋಧನ ತಂಡದಿAದ ಶೋಧ
ಹೊಸಪೇಟೆ: ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ಹೊಲವೊಂದರಲ್ಲಿ ಹೊಯ್ಸಳ ಕಾಲದ ಅಪ್ರಕಟಿತ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದಿAದ ಶೋಧ ಮಾಡಲಾಗಿದೆ.
ಈ ಶಾಸನವನ್ನು ತುಮಕೂರು ಶಶಿಕುಮಾರ ನಾಯಕ ಅವರ ಮಾರ್ಗದರ್ಶನದಲ್ಲಿ ಗುಂಡ್ಲವದ್ದಿಗೆರೆ ಗ್ರಾಮದ ಗೌರವ ಶಿಕ್ಷಕರಾದ ಮಂಕಾಳಪ್ಪ, ಮಲ್ಲನಗೌಡ, ಗಂಗಾಧರರವರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರಾದ ಡಾ.ಗೋವಿಂದ, ಪ್ರೊ.ತಿಪ್ಪೇಸ್ವಾಮಿ, ಡಾ.ಕೃಷ್ಣೆಗೌಡ, ಇಸ್ಮಾಯಿಲ್ ಸಿದ್ದಿಕ್, ಅಶೋಕ ತಲೇಖಾನ್ ಅವರು ಪತ್ತೆ ಹಚ್ಚಿದ್ದಾರೆ.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಈ ಶಾಸನವು ಗ್ರಾನೈಟ್ ಕಲ್ಲಿನಲ್ಲಿ ಬರೆಸಲಾಗಿದೆ. ಹದಿನೈದು ಸಾಲುಗಳುಳ್ಳ ಶಾಸನ ಎಂಟು ಅಡಿ ಎತ್ತರವಾಗಿದ್ದು, ಒಂದೂವರೆ ಅಡಿ ಅಗಲವಾಗಿದೆ. ಮೊದಲ ಸಾಲಿನಲ್ಲೇ ರಾಜನ ಹೆಸರನ್ನು ನಮೂದಿಸಲಾಗಿದೆ. ಹೊಯ್ಸಳರ ನಾರಸಿಂಹ ಚಕ್ರವರ್ತಿಯ ಕಾಲಾವಧಿಯಲ್ಲಿ ಗುಂಡ್ಲವದ್ದಿಗೆರೆಯನ್ನು ಕಾಸಿಗೌಡನು ಆಳ್ವಿಕೆ ನಡೆಸುತ್ತಿದ್ದನು. ಆತನು ಒಂದು ಕೆರೆಯನ್ನು ಕಟ್ಟಿಸಿದುದಲ್ಲದೇ ದೇಗುಲಕ್ಕೆ ಜಾಗಟೆ, ಕೊಳಗ ನೀಡಿರುವ ಕುರಿತಾಗಿದೆ. ಇದರಿಂದ ಜಿಲ್ಲೆಯಲ್ಲಿ ಹೊಯ್ಸಳ ಅರಸರ ಆಳ್ವಿಕೆ ಇತ್ತೆoದು ತಿಳಿದುಬರುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಗೋವಿಂದ ಮಾತನಾಡಿ, ಈ ದಾನ ಶಾಸನದಲ್ಲಿ ವಿಶೇಷವಾಗಿ ಬಡಗೇರರ ವೃತ್ತಿ ಉಲ್ಲೇಖವಿದೆ. ಕಾಸಿಗೌಡನು ಸಂಣಯನ ಮಗನಾದ ಬಡಗಿ ನಾಗಭೋಜನಿಗೆ ಹೊಲವೊಂದನ್ನು ದಾನ ನೀಡಿರುವ ವಿವರವಿದೆ. ಶಾಸನದಲ್ಲಿ ಸರ್ವಮಾನ್ಯ ಹೊಲ ಎಂದಿರುವುದರಿAದ ಯಾವುದೇ ರೀತಿಯ ತೆರಿಗೆ ಕಟ್ಟುವಂತಿರಲಿಲ್ಲ ಎಂದು ತಿಳಿಯುತ್ತದೆ. ಜತೆಗೆ ಸೂರ್ಯ ಚಂದ್ರ ನಕ್ಷತ್ರ ಇರುವವರೆಗೂ ಶಾಸನ ಇರಲಿ ಎಂದು ಶಾಪಾಶಯವು, ಹಾಗೇನೆ ದಾನ ನೀಡುವುದನ್ನು ತಪ್ಪಿಸಬಾರದೆಂಬ ಸಾಲುಗಳು ಶಾಸನದಲ್ಲಿ ಬರೆಸಲಾಗಿದೆ. ಇದೇ ರೀತಿಯಾಗಿ ಕಾಕುಬಾಳು ಕ್ರಾಸ್ ನ ಗುಂಡ್ಲವದ್ದಿಗೆರೆಯ ಚಂದ್ರಪ್ಪನವರ ಹೊಲವೊಂದರಲ್ಲಿ ಕುಂಬಾರ ಪೊನ್ನಿಮಯ್ಯನ ಮಗ ಯಂಕಬಿಯನ ಹೆಸರಲಿ ಕಟ್ಟಿಸಿದ ಕೆರೆ ಎಂಬ ಅಪ್ರಕಟಿತ ದಾನ ಶಾಸನವನ್ನು ನಮ್ಮ ತಂಡವು ಈ ಹಿಂದೆ ಪತ್ತೆ ಮಾಡಲಾಗಿತ್ತು. ಆ ಶಾಸನದಲ್ಲಿ ಕುಂಬಾರರ ವೃತ್ತಿ ಪ್ರಸ್ತಾಪಿಸಲಾಗಿದೆ. ಈ ಶಾಸನದಲ್ಲಿ ಬಡಗೇರರ ವೃತ್ತಿಯನ್ನು ಉಲ್ಲೇಖಿಸಲಾಗಿದೆ. ಶಾಸನ ಇರುವ ಅನತಿ ದೂರದಲ್ಲಿಯೇ ಕೆರೆಯ ಕುರುವು ಇದೆ. ಇದರಿಂದ ಆಗ ಮಳೆ ನೀರು ಪೋಲಾಗದಂತೆ ಕೆರೆಗಳನ್ನು ನಿರ್ಮಿಸಿರಬೇಕೆಂದು ಹಾಗೇನೆ ಗ್ರಾಮದಲ್ಲಿ ಅತ್ಯಂತ ಸುಂದರವಾದ ಈಶ್ವರ ದೇಗುಲವೊಂದಿದೆ. ಬಹುಷಃ ಶಾಸನದಲ್ಲಿ ತಿಳಿಸಿದಂತೆ ಗಂಟೆ, ಜಾಗಟೆಯನ್ನು ಇದೇ ದೇಗುಲಕ್ಕೆ ದಾನ ನೀಡಿರಬೇಕು. ಹಾಗೇನೆ ಇದರ ರಚನೆಯನ್ನು ಗಮನಿಸಿದರೆ ಹೊಯ್ಸಳ ಕಾಲಾವಧಿಯ ಗುಡಿ ಇರಬೇಕು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net