ವಿರೂಪಾಕ್ಷೇಶ್ವರ ರಥಬಿದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿರುವ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು.
ಹಂಪಿಯ ರಥ ಬೀದಿಯಲ್ಲಿ ಮಂಗಳವಾರ ತಡರಾತ್ರಿ ಕಾಮದಹನ ಮಾಡಲಾಯಿತು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು. ಸ್ಥಳೀಯ ಮಕ್ಕಳು, ಯುವಕರು ಹಾಗೂ ಸಾರ್ವಜನಿಕರೊಂದಿಗೆ ಬಣ್ಣದೋಕುಳಿಯಾಡಿ ಸಂಭ್ರಮಿಸಿದರು.
ಶ್ರೀ ವಿರೂಪಾಕ್ಷೇಶ್ವರ ದೇಗುಲ ಮುಂಭಾಗ, ರಾಜಬೀದಿ, ನದಿ ಪ್ರದೇಶ, ಎದುರು ಬಸವಣ್ಣ, ಬಸ್ ನಿಲ್ದಾಣ, ಗ್ರಾಮ ಪಂಚಾಯಿತಿ ಕಚೇರಿ, ಕಡಲೆಕಾಳು, ಸಾಸಿವೆ ಕಾಳು ಗಣಪತಿ ಪ್ರದೇಶ ಸೇರಿ ಕಮಲಾಪುರ ಹಾಗೂ ಕಡ್ಡಿರಾಂಪುರದ ಮಾರ್ಗಗಳಲ್ಲಿ ಬಣ್ಣದಾಟವಾಡುತ್ತಿದ್ದ ಪ್ರವಾಸಿಗರ ದಂಡೇ ಕಂಡುಬಂತು.
ರಂಗು ರಂಗಿನ ಬಣ್ಣಗಳ ಖರೀದಿ ಜೋರಾಗಿತ್ತು. ಹೋಳಿ ಆಚರಣೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಹಂಪಿಯಲ್ಲಿ ನಾನಾ ಕಡೆಗಳಲ್ಲಿ ನೆದರ್‌ಲ್ಯಾಂಡ್, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್ ವಿದೇಶಿ ಪ್ರವಾಸಿಗರ ಹೋಳಿ ಸಂಭ್ರಮ ಮನೆ ಮಾಡಿತ್ತು. ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಶುಭಾಶಯ ವಿನಿಮಯ ಮಾಡಿಕೊಂಡು ಕುಣಿದು ಕುಪ್ಪಳಿಸಿದರು.
ಪೊಲೀಸ್ ಬಿಗಿ ಭದ್ರತೆ
ಕಳೆದ ಬಾರಿ ಕೊಪ್ಪಳ ಜಿಲ್ಲೆಯ ಸಾಣಾಪುರದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಹಂಪಿಯಲ್ಲಿ ನಡೆದ ಹೋಳಿಗೆ ಸ್ಥಳಿಯ ಕಮಲಾಪುರ ಮತ್ತು ಕಡ್ಡಿರಾಂಪುರದ ನಿವಾಸಿಗಳನ್ನು ಹಂಪಿ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಈ ಬಾರಿ ಮಂಗಳವಾರ ರಾತ್ರಿ ಕಾಮ ದಹನ ವೇಳೆ ಕೆಲ ಕಿಲಿಗೇಡಿಗಳಿಂದ ಗಲಾಟೆಯಾಗಿದೆ. ಅದ್ದರಿಂದ ಪೊಲೀಸ್ ಭದ್ರತೆ ಬಿಗಿಯಾಗಿತ್ತು. ಎಸ್ಪಿ ಜಾಹ್ನವಿ, ಡಿವೈಎಸ್ಪಿ ಡಾ.ಟಿ.ಮಂಜುನಾಥ ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು.