ಕೊಟ್ಟೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಕೆ.ನೇಮಿರಾಜ್ ನಾಯ್ಕಗೆ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 25 ಸಾವಿರ ಕೋಳಿ ಸಾಕಾಣಿಕೆದಾರರಿದ್ದಾರೆ. 10 ಸಾವಿರ ಕೋಳಿ ಸಾಕಣೆ ಮಾಡಲು ಬ್ಯಾಂಕ್‌ನಲ್ಲಿ 30 ಲಕ್ಷ ರೂಪಾಯಿ ಸಾಲ ಮಾಡಿ ಶೆಡ್ ನಿರ್ಮಿಸಲಾಗಿದೆ. ಕೋಳಿ ಸಾಕಣೆಯನ್ನು ಕೃಷಿ ಎಂದು ಪರಿಗಣಿಸಿ ಸಹಾಯಧನ ಬಿಡುಗಡೆ ಮಾಡಬೇಕು. ಕಂಪನಿಗಳಿಂದ ರೈತರನ್ನು ರಕ್ಷಣೆ ಮಾಡಲು ಕಾನೂನು ರೂಪಿಸಬೇಕು. ವೈಜ್ಞಾನಿಕ ಪದ್ಧತಿಯಡಿ ಕೋಳಿ ಸಾಕಣೆ ಮಾಡಲು ಆಟೋಮೆಟಿಕ್ ಫೀಡಿಂಗ್ ನಿಪ್ಪಲ್ ಸಿಸ್ಟಂ ಅಳವಡಿಕೆಗೆ ಶೇ.90 ಸಹಾಯಧನ ಸೌಲಭ್ಯ ನೀಡಬೇಕು. ನಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಬಳಿ ಸಭೆಗೆ ಸಮಯ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.