ಕೈಕೊಟ್ಟ ಮುಂಗಾರು ಕಮರಿದ ಕೃಷಿ

ಹರಪನಹಳ್ಳಿ ತಾಲೂಕಿನ ನಂದಿಬೇವು ಬಳಿ ಬಿತ್ತನೆಯಾಗಿರುವ ಮೆಕ್ಕೆಜೋಳ ಒಣಗುತ್ತಿರುವುದು.
ಹರಪನಹಳ್ಳಿ ತಾಲೂಕಿನ ನಂದಿಬೇವು ಬಳಿ ಬಿತ್ತನೆಯಾಗಿರುವ ಮೆಕ್ಕೆಜೋಳ ಒಣಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ಜಿಲ್ಲೆಯಲ್ಲಿ ಶೇ.57 ರಷ್ಟು ಮಳೆ ಕೊರತೆ
  • ಆಕಾಶದ ಕಡೆ ಮುಖ ಮಾಡಿದ ರೈತರು
  • ಒಣಗುತ್ತಿದೆ ಮಳೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕಳೆದ ಕೆಲವು ವರ್ಷಗಳಿಂದ ಸಕಾಲಕ್ಕೆ ಸುರಿದು ಮುಂಗಾರು ಹಂಗಾಮಿನಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದ ವರುಣದೇವ, ಈ ಬಾರಿ ಮಾತ್ರ ಸಂಪೂರ್ಣ ಕೈಕೊಟ್ಟಿದ್ದಾನೆ. ಜೂನ್ ಮೂರನೇ ವಾರ ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ, ವಿಜಯನಗರ ಜಿಲ್ಲೆಯ ಅನ್ನದಾತರು ಈಗ ಆಕಾಶದ ಕಡೆ ಮುಖ ಮಾಡಿ ಮಳೆಗಾಗಿ ಪ್ರಾರ್ಥಿಸುವಂತಾಗಿದೆ. ಬಿತ್ತಿದ ಬೀಜಗಳು ಮೊಳಕೆಯಲ್ಲೇ ಕಮರಿ ಹೋಗುತ್ತಿರುವುದು ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ.
ಮೇ ತಿಂಗಳ ಕೆಲ ದಿನ ಹಾಗೂ ಜೂನ್ ಮೊದಲ ವಾರದಲ್ಲಿ ಜಿಲ್ಲೆಯಾದ್ಯಂತ ಮಳೆಯಾಗಿತ್ತು. ಆದರೆ, ಮುಂಗಾರು ಆರಂಭವಾಗಿ 15 ದಿನ ಮೀರಿದರೂ ಜಿಲ್ಲೆಯಲ್ಲಿ ಒಮ್ಮೆಯೂ ಹದ ಮಳೆಯಾಗದೆ ಎಲ್ಲೆಲ್ಲೂ ಬರದ ಛಾಯೆ ಕಂಡು ಬರುತ್ತಿದೆ. ಇಂತಹ ಹೊತ್ತಿನಲ್ಲಿ ಇನ್ನೂ ಒಂದು ವಾರ ಮಳೆಯ ಮುನ್ಸೂಚನೆ ಇಲ್ಲ ಎಂಬ ಆಘಾತಕಾರಿ ವಿಷಯವನ್ನು ಐಎಂಡಿ ನೀಡಿದ್ದು, ರೈತನ ಜಂಘಾ ಬಲವನ್ನೇ ಹುದುಗಿಸಿದೆ. ವಿಜಯನಗರ ಜಿಲ್ಲೆ ಮಳೆಯಿಲ್ಲದೆ ನಲುಗುತ್ತಿದೆ.
ಮಳೆ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಒಂದು ವಾರದ ಮುನ್ಸೂಚನೆ ನೀಡಿದ್ದು ಈ ವಾರವೂ ಮಳೆಯಿಲ್ಲ ಎಂದು ತಿಳಿಸಿದೆ. ಇಲಾಖೆ ಈ ಹಿಂದೆ ಈ ಬಾರಿ ಮಳೆಗಾಲದ ಮೇಲೆ ಎಲ್ನಿನೋ ಪರಿಣಾಮ ಬೀರಬಹುದು, ಮಳೆ ವಾಡಿಕೆಗಿಂತ ಕಡಿಮೆ ಆಗಬಹುದು, ಶೇ.90 ರಷ್ಟು ಮಾತ್ರ ಮಳೆಯಾಗಬಹುದು ಎಂದು ಅಂದಾಜಿಸಿತ್ತು. ಆದರೀಗ ಅದು ಇನ್ನೂ ಹೆಚ್ಚಾಗಬಹುದು, ಬರ ಆವರಿಸಬಹುದಾ ಎಂಬ ಆತಂಕ ಹುಟ್ಟಿಸುವಷ್ಟು ಮಳೆ ಮಾಯವಾಗಿದೆ.

ಶೇ.57ರಷ್ಟು ಮಳೆ ಕೊರತೆ

ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಲ್ಲಿ ಅಲ್ಲೊಂದು ಇಲ್ಲೊಂದು ಸಾಧಾರಣ ಮಳೆಯಾಗಿದ್ದನ್ನು ಹೊರತುಪಡಿಸಿದರೆ, ಜೂನ್ ತಿಂಗಳಲ್ಲಿ ಹೇಳಿಕೊಳ್ಳುವಂತಹ ಯಾವುದೇ ಮಳೆಯಾಗಿಲ್ಲ. ಕಳೆದ ಕೇವಲ ಒಂದು ವಾರದಲ್ಲೇ ಜಿಲ್ಲೆಯಾದ್ಯಂತ ಭೀಕರ ಶೇ. 69 ರಷ್ಟು ಮಳೆ ಕೊರತೆ ದಾಖಲಾಗಿದೆ. ಜೂನ್ ತಿಂಗಳ 19 ದಿನಗಳ ಅಂಕಿ-ಅAಶಗಳನ್ನು ಗಮನಿಸಿದರೆ ಜಿಲ್ಲೆಯಾದ್ಯಂತ ಒಟ್ಟು ಶೇ.57 ರಷ್ಟು ಮಳೆ ಕೊರತೆ ಎದುರಾಗಿದೆ. ತಾಲೂಕುವಾರು ನೋಡುವುದಾದರೆ ಹೊಸಪೇಟೆ ಶೇ.74, ಹಗರಿಬೊಮ್ಮನಹಳ್ಳಿ ಶೇ.68, ಕೊಟ್ಟೂರು ಶೇ.52, ಹರಪನಹಳ್ಳಿ ಶೇ.51, ಹೂವಿನಹಡಗಲಿ ಶೇ.47, ಕೂಡ್ಲಿಗಿ ಶೇ.45 ರಷ್ಟು ಮಳೆ ಕೊರತೆಯಾಗಿದೆ.
ಕಮಾಲಪುರ ಬಳಿ ಬಿತ್ತನೆಯಾಗಿ ಮೊಳಕೆ ಕೊಡೆಯದೇ ಇರುವುದು ಹೋಲ

ಕುಂಠಿತಗೊಂಡ ಬಿತ್ತನೆ ಕಾರ್ಯ

ಗುರಿ ತಲುಪದ ಕೃಷಿ ಚಟುವಟಿಕೆ ಮಳೆಯ ತೀವ್ರ ಅಭಾವದಿಂದಾಗಿ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 29.43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಜೂನ್ ಮುಗಿಯುತ್ತಾ ಬಂದರೂ ಕೇವಲ 5.66 ಸಾವಿರ ಹೆಕ್ಟೇರ್ (ಶೇ.19) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ತಾಲೂಕುವಾರು ಬಿತ್ತನೆ ಪ್ರಮಾಣವನ್ನು ನೋಡುವುದಾದರೆ, ಹೊಸಪೇಟೆ ತಾಲೂಕಿನಲ್ಲಿ ಗರಿಷ್ಠ ಶೇ.52.82 ರಷ್ಟು ಬಿತ್ತನೆಯಾಗಿದ್ದರೆ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕೇವಲ ಶೇ. 3.25 ರಷ್ಟು ಮಾತ್ರ ಪ್ರಗತಿ ಕಂಡಿದೆ. ಉಳಿದಂತೆ ಕೊಟ್ಟೂರು ಶೇ.28.20, ಹೂವಿನಹಡಗಲಿ ಶೇ.25.85, ಕೂಡ್ಲಿಗಿ ಶೇ. 17.15 ಹಾಗೂ ಹರಪನಹಳ್ಳಿಯಲ್ಲಿ ಶೇ.15.40 ರಷ್ಟು ಬಿತ್ತನೆ ಕಾರ್ಯ ನಡೆದಿದೆ.
ಕೂಡ್ಲಿಗಿ ಚೋರನೂರು ರಸ್ತೆಯಲ್ಲಿ ಬಿತ್ತನೆಗಾಗಿ ಭೂಮಿ ಹದ ಮಾಡಿ ಮಳೆಗಾಗಿ

ದಾಸ್ತಾನಿನಲ್ಲೇ ಉಳಿದ ಬಿತ್ತನೆ ಬೀಜಗಳು

ಕೃಷಿ ಇಲಾಖೆಯು ರೈತರಿಗಾಗಿ ಭತ್ತ, ಜೋಳ, ಮೆಕ್ಕೆಜೋಳ, ರಾಗಿ, ಸಜ್ಜೆ ಹಾಗೂ ನವಣೆ ಸೇರಿದಂತೆ ಒಟ್ಟು 9 ಸಾವಿರ ಕ್ವಿಂಟಲ್ ಬಿತ್ತನೆ ಬೀಜಗಳನ್ನು ಸಿದ್ಧಪಡಿಸಿಟ್ಟುಕೊಂಡಿತ್ತು. ಆದರೆ ಮಳೆ ಬಾರದ ಕಾರಣ ರೈತರು ಬೀಜ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಸದ್ಯ ಲಭ್ಯವಿರುವ ಬೀಜಗಳ ಪೈಕಿ ಕೇವಲ 3.3 ಸಾವಿರ ಕ್ವಿಂಟಲ್ ಬೀಜಗಳು ಮಾತ್ರ ವಿತರಣೆಯಾಗಿದ್ದು, ಇನ್ನೂ 5.6 ಸಾವಿರ ಕ್ವಿಂಟಲ್ ಬೀಜಗಳು ದಾಸ್ತಾನಿನಲ್ಲೇ ಉಳಿದುಕೊಂಡಿವೆ.

ಜೂ.27ರ ಮೇಲೆ ರೈತರ ಕಣ್ಣು!

ಸದ್ಯದ ಪರಿಸ್ಥಿತಿಯಲ್ಲಿ ಜುಲೈ ತಿಂಗಳಿನಲ್ಲಾದರೂ ಉತ್ತಮ ಮಳೆಯಾದರೆ ರೈತರಿಗೆ ತುಂಬಾ ಅನುಕೂಲವಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜೂ.21ರಿಂದ ಜಿಲ್ಲೆಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಈ ಮಳೆಯಾದರೂ ಸಕಾಲಕ್ಕೆ ಬಂದು ಕೈಕೊಟ್ಟ ಮುಂಗಾರನ್ನು ಕೈಹಿಡಿಯಲಿದೆಯೇ ಎಂದು ಜಿಲ್ಲೆಯ ರೈತಾಪಿ ವರ್ಗ ಕಾದು ನೋಡುತ್ತಿದೆ.
"

ಜೂನ್ ತಿಂಗಳ ಮಳೆ ಕೊರತೆಯಾಗಿದೆ. ಬಿತ್ತನೆ ಮಾಡಿದ ಬೀಜಗಳು ಜಮೀನಿನಲ್ಲೇ ಕಮರಿಹೋಗುತ್ತಿವೆ. ಈ ಬಾರ ಮಳೆ ಬಾರದಿದ್ದರೆ ಸಂಪೂರ್ಣ ಒಣಗಲಿವೆ. ಮಳೆ ಮೂನ್ಸೂಚನೆ ನೋಡಿ ರೈತರು ಬಿತ್ತನೆ ಮಾಡಬೇಕು. ಕೃಷಿ ಇಲಾಕೆ ಸಲಹೆ ಪಡೆಯಲಿ.

— ಟಿ.ಡಿ.ಮಂಜುನಾಥ, ಕೃಷಿ ಜೆಡಿ, ವಿಜಯನಗರ


"

ಮುಂಗಾರು ಸಂಪೂರ್ಣ ಹಿನ್ನಡೆಯಾಗಿ ರೈತನು ಮೋಡದತ್ತ ಮುಖ ಮಾಡುವಂತಾಗಿದೆ, ಇನ್ನೂ ಎರಡ್ಮೂರು ದಿನಗಳಲ್ಲಿ ಮಳೆ ಬಾರದೆ ಇದ್ದಲ್ಲಿ ಈಗಾಗಲೇ ಭಿತ್ತನೆ ಮಾಡಿರುವ ಬೆಳೆಗಳು ಸಂಪೂರ್ಣ ಬಾಡಿ ಹೋಗಿ, ರೈತನ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಲಿದೆ. ಸಾಲವನ್ನು ಮಾಡಿ ದುಬಾರಿ ಬೀಜ ಗೊಬ್ಬರ ಖರೀದಿಸಿ ಭೂಮಿಗೆ ಹಾಕಲಾಗಿದೆ, ಮಳೆಯ ಹಿನ್ನಡೆಯು ರೈತನಿಗೆ ಸಾಲದ ಹೊರೆಯನ್ನು ಹೆಚ್ಚಿಸಲಿದೆ.

— ಗಂಗಪ್ಪ ಹುಲಿಕಟ್ಟಿ, ರೈತ, ಹರಪನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net